ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಮಾತ್ರ ಮುಸ್ಲಿಂ ಸಮುದಾಯವು ನಲ್ಲಿತೊಪ್ಪು ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್‌ನ ತೀರ್ಪನ್ನು ‘ಸಮತೋಲಿತ ಆದೇಶ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಮಾಮ್ ಹುಸೈನ್ ಎಂಬ ಅರ್ಜಿದಾರರು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಮದ್ರಾಸ್ ಹೈಕೊರ್ಟ್ನ ನ್ಯಾಯಮೂರ್ತಿಗಳು ನೀಡಿದ ಮಾರ್ಗಸೂಚಿಗಳು ಎಲ್ಲ ಸಮುದಾಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡಿವೆ. ದರ್ಗಾ ಆವರಣದಲ್ಲಿ ಪ್ರಾಣಿಬಲಿ ನಿಷೇಧ ಮುಂದುವರಿಯಲಿದ್ದು, ಕೇವಲ ವಿಶೇಷ ಹಬ್ಬಗಳ ಸಮಯದಲ್ಲಿ ಮಾತ್ರ ನಮಾಜ್ ಸಲ್ಲಿಕೆಗೆ ಅನುಮತಿ ಇರಲಿದೆ.
ತಮಿಳುನಾಡಿನ ಮದುರೈ ಬಳಿಯಿರುವ ತಿರುಪಾರಂಕುಂದ್ರಂ ಎಂಬ ಪುಣ್ಯಕ್ಷೇತ್ರದಲ್ಲಿ ಬೆಟ್ಟವೊಂದಿದ್ದು ಅದರಲ್ಲಿ ಮುರುಗನ್ ಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನಗಳಿವೆ. ಅದೇ ಬೆಟ್ಟದ ತುದಿಯಲ್ಲಿ ಸಿಕಂದರ್ ದರ್ಗಾ ಎಂಬ ಮುಸ್ಲಿಮರ ಪುಣ್ಯಕ್ಷೇತ್ರವೂ ಇದೆ. ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಮುರುಗನ್ ದೇವಾಲಯಗಳ ನಡುವೆ ಇರುವ ದೀಪ ಮಂಟಪಂ ಎಂಬಲ್ಲಿ ಪ್ರತಿ ವರ್ಷ ತಮಿಳರ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಮಾಡಲಾಗುತ್ತದೆ.
ಆದರೆ, ಹಿಂದು ಕಾರ್ಯಕರ್ತರೊಬ್ಬರು ಆ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆಸಿಕೊಂಡು ಬಂದಿರುವ ದೀಪೋತ್ಸವವನ್ನು ಆ ಬೆಟ್ಟದ ತುಟ್ಟತುದಿಯಲ್ಲಿ ಮಾಡಬೇಕು ಎಂದು ಮದುರೈ ಪೀಠದ ಮೊರೆ ಹೋಗಿದ್ದರು. ಅದಕ್ಕೆ ನ್ಯಾ. ಜಿ.ಆರ್. ಸ್ವಾಮಿನಾಥನ್ ಅವರು ಒಪ್ಪಿಗೆ ನೀಡಿ ಬೆಟ್ಟದ ಮೇಲೆಯೇ ದೀಪಾರಾಧನೆ ಮಾಡುವಂತೆ ಆದೇಶಿಸಿದ್ದರು. ಈ ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ನಲ್ಲಿತೊಪ್ಪುವಿನಲ್ಲಿ ಸುಮಾರು 33 ಸೆಂಟ್ಸ್ ಭೂಮಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎಂದು ವಿಚಾರಣಾ ನ್ಯಾಯಾಲಯ ಮತ್ತು ಪ್ರಿವಿ ಕೌನ್ಸಿಲ್ ಈಗಾಗಲೇ ಗುರುತಿಸಿವೆ ಎಂದು ವಾದಿಸಿದರು. ಭೂಮಿಯ ಮಾಲೀಕತ್ವವನ್ನು ಒಪ್ಪಿಕೊಂಡಿದ್ದರೂ, ಹೈಕೋರ್ಟ್ ಪ್ರಾರ್ಥನೆಗೆ ಅನುಮತಿಯನ್ನು ರಂಜಾನ್ ಮತ್ತು ಬಕ್ರೀದ್‌ಗೆ ಮಾತ್ರ ಸೀಮಿತಗೊಳಿಸಿದೆ, ಇದು ಸಮುದಾಯದ ಧಾರ್ಮಿಕ ಹಕ್ಕುಗಳ ಮೇಲೆ ಅಸಮಂಜಸ ನಿರ್ಬಂಧವನ್ನು ರೂಪಿಸಿದೆ ಎಂದು ಅವರು ವಾದಿಸಿದರು.
ಮೂಲ ಅರ್ಜಿದಾರರಾದ ರಮಾ ರವಿಕುಮಾರ್ ಎಂಬವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ, ಬೆಟ್ಟದ ಮೇಲೆ ದೀಪಂ ಬೆಳಗಿಸುವ ಹಕ್ಕು ಅರುಳ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ವಾದಿಸಲಾಗಿತ್ತು. ಹೈಕೋರ್ಟ್ ಈ ಹಕ್ಕನ್ನು ಮಾನ್ಯ ಮಾಡಿದ್ದರೂ, ಎಎಸ್‌ಐ ಮತ್ತು ಪೊಲೀಸ್ ಅನುಮತಿ ಅವಶ್ಯಕವೆಂದು ಹೇಳಿದ್ದು ನ್ಯಾಯಾಂಗ ಹಸ್ತಕ್ಷೇಪವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಜೊತೆಗೆ ದೀಪಂ ಬೆಳಗಿಸುವುದು ದೇವಸ್ಥಾನದ ಆಂತರಿಕ ಧಾರ್ಮಿಕ ವಿಚಾರವಾಗಿದ್ದು, ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡಿಸಲಾಗದು ಎಂದು ವಾದಿಸಿದರು. ಆದರೆ, ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ ಬೆಟ್ಟದ ಸ್ವಾಮ್ಯ ಹಕ್ಕು ದೇವಸ್ಥಾನಕ್ಕೆ ಸೇರಿದೆ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಇದೇ ವೇಳೆ, ತಿರುಪ್ಪರಂಕುಂಡ್ರಂ ದೇವಸ್ಥಾನದ ಆಡಳಿತವನ್ನು ಎಎಸ್ಐ ವಹಿಸಿಕೊಳ್ಳಬೇಕು ಮತ್ತು ದೀಪತೂನ್ ನಲ್ಲಿ ದೈನಂದಿನ ದೀಪ ಬೆಳಗುವ ಬಗ್ಗೆ ನಿರ್ದೇಶನ ಕೋರಿ ಹಿಂದು ಧರ್ಮ ಪರಿಷತ್ ಸಲ್ಲಿಸಿರುವ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.



