ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ. ಕರ್ನಾಟಕಕ್ಕಂತೂ ಭಾರಿ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಕೇಂದ್ರದ ಬಜೆಟ್ ನಲ್ಲಿ ಕೈಗಾರಿಕೆ, ರೈಲ್ವೆ ಸೇರಿ ಯಾವುದೇ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ಕೊಟ್ಟಿಲ್ಲ. ರಾಯಚೂರಿನಲ್ಲಿ ಒಂದು ಏಮ್ಸ್ ನಿರ್ಮಿಸಿ ಎಂದು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ. ಆದರೆ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಒಟ್ಟಿನಲ್ಲಿ ಈ ಬಜೆಟ್ ನಿರಾಶಾದಾಯಕ, ನೀರಸವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರಿಗೆ ಭಾರಿ ಅನ್ಯಾಯವಾಗಿದೆ. ಅವರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುತ್ತೇವೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದರು. ಈ ಬಜೆಟ್‌ನಲ್ಲಾದರೂ ನಮಗೆ 5,300 ಕೋಟಿ ರೂ. ಕೊಡಿ ಎಂಬುದಾಗಿ ಮನವಿ ಮಾಡಿದ್ದೆವು. ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬೆಂಗಳೂರು ನಗರಾಭಿವೃದ್ಧಿ ಯೋಜನೆ, 15ನೇ ಹಣಕಾಸು ಆಯೋಗದ ಶಿಫಾರಸುಗಳ ಜಾರಿ ಸೇರಿ ಹಲವು ಬೇಡಿಕೆಗಳನ್ನು ಇಡಲಾಗಿತ್ತು. ಒಟ್ಟು 11,495 ಕೋಟಿ ರೂ. ಕೊಡಿ ಎಂದು ಕೇಳಿದ್ದೆವು. ಆದರೆ, ಕೇಂದ್ರ ಸರ್ಕಾರವು ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಈ ಬಜೆಟ್ ಬಿಹಾರ, ಆಂಧ್ರಕ್ಕೆ ಮಾತ್ರ ಅನುಕೂಲ
ಕೇಂದ್ರ ಸರ್ಕಾರ ಬಿಹಾರ ಹಾಗೂ ಆಂಧ್ರಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದೆ. ಆದರೆ, ಕರ್ನಾಟಕಕ್ಕೆ ಬಜೆಟ್‌ನಿಂದ ಯಾವುದೇ ಪ್ರಯೋಜನವಾಗಿಲ್ಲ. ನಿರ್ಮಲಾ ಸೀತಾರಾಮನ್ ಅವರು ಕರೆದ ಸಭೆಯಲ್ಲಿ ನಾವು ನೀಡಿದ ಬೇಡಿಕೆಗಳನ್ನು ಈಡೇರಿಸಿಲ್ಲ. ಬಜೆಟ್‌ಗೂ ಮುನ್ನ ಅವರೇ ಕರೆದ ಸಭೆಯಲ್ಲಿ ಕರ್ನಾಟಕಕ್ಕೆ ಏನು ಬೇಕು, ಬೇಡಿಕೆಗಳು ಏನು ಎಂಬುದನ್ನು ತಿಳಿಸಿದ್ದೆವು. ಆದರೆ, ಒಂದೇ ಒಂದು ಬೇಡಿಕೆಯನ್ನು ಅವರು ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಮೂರ್ಖರೊಡನೆ ಮಾತನಾಡಬಾರದು !
ಮಾತನಾಡಿದರೆ ಮೂರ್ಖನಂತೆಯೇ ಮಾತನಾಡಬೇಕು !