ವಿಧಾನಸಭಾ ಚುನಾವಣೆ: ಈ ಕ್ಷೇತ್ರದಲ್ಲಿದ್ದಾರೆ ಅತೀ ಹೆಚ್ಚು ಶತಾಯುಷಿ ಮತದಾರರು!

-ಚಂದ್ರಶೇಖರ ಎಸ್. ಚಿನಕೇಕರ, ಚಿಕ್ಕೋಡಿ

ಹಿರಿಯರಿದ್ದ ಮನೆ ಚಂದ, ಗುರುವಿದ್ದ ಮಠ ಚಂದ. ಶತಾಯುಷಿ ಮತದಾರರು ಇದ್ದರೆ… ಪ್ರಜಾಪ್ರಭುತ್ವಕ್ಕೆ ಭೂಷಣ ಅಲ್ಲವೇ? ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕುಡಚಿ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರು ಇರುವ ಮಾಹಿತಿ ಜಿಲ್ಲಾ ಚುನಾವಣಾ ಆಯೋಗದ ಸಮೀಕ್ಷಾ ವರದಿಯಿಂದ ಗೊತ್ತಾಗಿದೆ.

ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ಅತೀ ಹೆಚ್ಚು ಶತಾಯುಷಿ ಮತದಾರರನ್ನು ಹೊಂದಿರುವ 2ನೇ ಜಿಲ್ಲೆಯಾಗಿದ್ದು, ಮೈಸೂರು ಮೊದಲನೇ ಜಿಲ್ಲೆಯಾಗಿದೆ.

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಲವು ಕುತೂಹಲಕಾರಿ ಸಂಗತಿಗಳಿವೆ. ಅದರಲ್ಲಿ ಅತೀ ಹೆಚ್ಚು ಶತಾಯುಷಿಗಳನ್ನು ಹೊಂದಿರುವ ಕ್ಷೇತ್ರ ಚಿಕ್ಕೋಡಿ ಲೋಕಸಭಾ ಕ್ಷೇತ್ರವ್ಯಾಪ್ತಿಯ ಕುಡಚಿ (ಎಸ್ಸಿ ಮೀಸಲು) ಕ್ಷೇತ್ರದ ಹೆಮ್ಮೆಯೇ ಸರಿ. ಕರ್ನಾಟಕ ರಾಜ್ಯದಲ್ಲಿ 100 ವರ್ಷ ದಾಟಿದ 16973 ಮತದಾರರಿದ್ದಾರೆ. ಇವರಲ್ಲಿ 9985 ಮಹಿಳೆಯರಿದ್ದು, 6988 ಪುರುಷರಿದ್ದಾರೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಂಕಿ ಅಂಶಗಳ ಮಾಹಿತಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1536 ಶತಾಯುಷಿ ಮತದಾರಿದ್ದು, ಕುಡಚಿ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 190 ಶತಾಯುಷಿ ಮತದಾರರಿದ್ದಾರೆ. ಕಿತ್ತೂರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 38 ಶತಾಯುಷಿ ಮತದಾರರಿದ್ದಾರೆ.

ಕುಡಚಿ 190, ಬೆಳಗಾವಿ ದಕ್ಷಿಣ 155, ರಾಯಬಾಗ 149, ಬೆಳಗಾವಿ ಉತ್ತರ 129, ಗೋಕಾಕ 101, ಕಾಗವಾಡ 101, ಬೆಳಗಾವಿ ಗ್ರಾಮೀಣ 99, ಅರಬಾವಿ 80, ಯಮಕನಮರಡಿ 68, ನಿಪ್ಪಾಣಿ 59, ಹುಕ್ಕೇರಿ 59, ಬೈಲಹೊಂಗಲ 59, ಅಥಣಿ 53, ರಾಮದುರ್ಗ 52, ಚಿಕ್ಕೋಡಿ-ಸದಲಗಾ 51, ಖಾನಾಪೂರ 49, ಸವದತ್ತಿ ಯಲ್ಲಮ್ಮ 44, ಕಿತ್ತೂರ 38 ಶತಾಯುಷಿ ಮತದಾರರಿದ್ದಾರೆ.

ಪ್ರತಿ ಬಾರಿಯು ಚುನಾವಣೆಯಲ್ಲಿ ವಯೋವೃದ್ಧರನ್ನು ಗಾಡಿಯಲ್ಲಿ, ಜೀಪ್ ನಲ್ಲಿ, ಗಾಲಿ ಖುರ್ಚಿಯಲ್ಲಿಯೋ ಕರೆದುಕೊಂಡು ಹೋಗಲಾಗುತ್ತಿತ್ತು. ಕೆಲವರಂತೂ ವಯಸ್ಸಾಯ್ತು ಮತಗಟ್ಟೆಗೆ ಹೇಗಪ್ಪಾ ಹೋಗೋದು ಅಂತಾ ಮತ ಹಾಕದೇ ಮನೆಯಲ್ಲಿಯೇ ಸಾಕಷ್ಟು ಹಿರಿಯರು ಇರುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ 80 ವಯಸ್ಸು ದಾಟಿದವರಿಗೆ ತಮ್ಮ ತಮ್ಮ ಮನೆಯಿಂದಲೇ ಅಂಚೆ ಮತ ಹಾಕಲು ಅವಕಾಶ ನೀಡಿದ್ದರಿಂದ ಹಿರಿಯರು ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ.
ಮಾ.27ರ ಅಂಕಿ ಅಂಶಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 19,68,928 ಪುರುಷ ಮತದಾರರು, 19,32,576 ಮಹಿಳಾ ಮತದಾರರು, ತೃತೀಯ ಲಿಂಗ 141 ಮತದಾರರು ಸೇರಿದಂತೆ ಒಟ್ಟು 39,01,645 ಮತದಾರರು ಇದ್ದಾರೆ. ಏಪ್ರಿಲ್ 11ರ ವರೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅರ್ಹ ಮತದಾರರು ನೋಂದಣಿ ಮಾಡಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ಶತಾಯುಷಿಗಳು ಸೇರಿದಂತೆ ವಯೋವೃದ್ಧರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವುದು ಹೆಚ್ಚು ಸುದ್ದಿಯಾಗುತ್ತಿತ್ತು. ಆದರೆ, ಇದೀಗ ಶತಾಯುಷಿಗಳು ಸೇರಿದಂತೆ 80 ವಯಸ್ಸು ದಾಟಿದವರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಮತದಾನ ಮಾಡುವ ಅವಕಾಶ ದೊರೆತಿದ್ದರಿಂದ ಇಷ್ಟು ದಿನಗಳ ಕಾಲ ಹಿರಿಯರು ಪಡುತ್ತಿದ್ದ ಪ್ರಯಾಸ ಇನ್ನು ಇಲ್ಲದಂತಾಗಿದೆ. ಅದರಲ್ಲೂ ಕುಡಚಿ ಕ್ಷೇತ್ರದಲ್ಲಿ ಅತೀ ಹೆಚ್ಚು ಶತಾಯುಷಿ ಮತದಾರರು ಇರುವುದು ಹೆಮ್ಮೆಯ ಸಂಗತಿಯೇ ಅಲ್ಲವೇ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!