ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಂಠಿ ಯಾರಿಗೆ ಗೊತ್ತಿಲ್ಲ ಹೇಳಿ? ಇದೊಂದು ಉತ್ತಮ ಸಾಂಬಾರ್ ಪದಾರ್ಥ. ಆಹಾರದಲ್ಲಿ ಬಳಸುವ ಈ ವಸ್ತು ಔಷಧೀಯ ಗುಣವನ್ನೂ ಹೊಂದಿದೆ. ಶುಂಠಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿ ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮೊದಲಾದ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮಲೆನಾಡು, ಬಯಲು ಸೀಮೆಯಲ್ಲೂ ವ್ಯಾಪಕವಾಗಿ ಶುಂಠಿ ಬೆಳೆ ಬೆಳೆಯಲಾಗುತ್ತಿದೆ.
ಜಿಂಜೆರೋಲ್, ಶೊಗಾಲ್ ಮತ್ತು ಜಿಂಜೆರೋನ್ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ವಿಶೇಷವಾದ ಘಾಟು ಹಾಗೂ ರುಚಿ ಉತ್ಪತ್ತಿಯಾಗುತ್ತದೆ. ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ಬಳಸಲಾಗುತ್ತದೆ. ಔಷಧಿಯಲ್ಲೂ ಈ ಶುಂಠಿ ಬಳಕೆಯಲ್ಲಿದೆ ಎಂಬುದು ಗಮನಾರ್ಹ.
ಶುಂಠಿ ಹಸಿವನ್ನು ಜಾಗೃತಗೊಳಿಸಿ ಮಲಬದ್ಧತೆಯನ್ನು ನೀಗಿಸುವ ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಇದೆ. ಇದು ಮೆಗ್ನೀಸಿಯಮ್, ಫಾಸ್ಪರಸ್, ಸಿಲಿಕಾನ್, ಸೋಡಿಯಂ, ಕಬ್ಬಿಣ, ಸತು, ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ನಂತಹ ಖನಿಜಾಂಶಗಳಿಂದ ಕೂಡಿದೆ.
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಜಿಂಜೆರೋಲ್ಗಳು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯಾಗಿಯೂ ಶುಂಠಿ ಬಳಸಲಾಗುತ್ತದೆ. ತಲೆ ಸುತ್ತುವಿಕೆ, ಹೊಟ್ಟೆ ತೊಳಸುವಿಕೆಗೆ ಶುಂಠಿ ಉತ್ತಮ ಶಮನಕಾರಕವೆಂದು ಪರಿಗಣಿಸಲಾಗಿದೆ. ರಕ್ತದಲ್ಲಿರುವ ಕೆಟ್ಟ ಕೊಬ್ಬು ನಿವಾರಣೆಗೂ ಶುಂಠಿ ಬಳಸಲಾಗುತ್ತದೆ. ಶುಂಠಿ ರಸ ಸೇವನೆಯಿಂದ ನರಮಂಡಲದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಒಣಕೆಮ್ಮು, ಕಫ ಶಮನವಾಗುತ್ತದೆ.