ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆಯ ಚನ್ನಗಿರಿಯಲ್ಲಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವತಿಗೆ ಜೀವದಾನ ಮಾಡಿದ್ದು ಪುನೀತ್ ರಾಜ್‌ಕುಮಾರ್. ಆದರೆ ಪುನೀತ್ ನಿಧನದಿಂದ ಮಂಕಾದ ಯುವತಿ, ಅನ್ನ ನೀರು ತ್ಯಜಿಸಿ ಇಂದು ಇಹಲೋಕ ತೊರೆದಿದ್ದಾಳೆ.
ಇಸ್ತ್ರಿ ಮಾಡುವ ಕುಮಾರ್ ಹಾಗೂ ಮಂಜುಳ ದಂಪತಿ ಮಗಳು ಪ್ರೀತಿಗೆ ಸದಾ ತಲೆನೋವು ಕಾಡುತ್ತಿತ್ತು. ತಲೆನೋವಿನ ಮಾತ್ರಗಳನ್ನು ಕೊಟ್ಟು ಪೋಷಕರು ಸುಮ್ಮನಾಗಿದ್ದರು. ಇನ್ನು ಸುತ್ತಮುತ್ತಲಿನ ಸಾಕಷ್ಟು ಆಸ್ಪತ್ರೆಗಳಿಗೂ ತೋರಿಸಿದ್ದರು. ವಾಸಿಯಾಗದ ಕಾರಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೀತಿ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಡಯಾಲಿಸಿಸ್ ಮಾಡಿಸಬೇಕು. ಹಾಗೇ ಬೇರೆ ಕಿಡ್ನಿ ಹಾಕಿದರೆ ಅವಳು ಬದುಕುತ್ತಾಳೆ ಎಂದು ವೈದ್ಯರು ಹೇಳಿದ್ದರು.
ಈ ವಿಷಯ ಪುನೀತ್‌ಗೆ ತಿಳಿದಿದ್ದು, ಆಪರೇಷನ್‌ಗೆ ಹಣವನ್ನು ಪುನೀತ್ ನೀಡಿದ್ದಾರೆ. ತಂದೆಯ ಕಿಡ್ನಿಯನ್ನೇ ಮಗಳಿಗೆ ಹಾಕಿದ್ದು, ಪ್ರೀತಿಗೆ ಪುನೀತ್ ಜೀವದಾನ ನೀಡಿದ್ದರು. ಅಷ್ಟೇ ಅಲ್ಲದೆ ಮನೆ ಬಾಡಿಗೆಗೆ ತಿಂಗಳು ಹಣ ನೀಡುತ್ತಿದ್ದರು.
ಇದಾದ ಆರು ವರ್ಷಗಳ ನಂತರ ಪ್ರೀತಿ ಮೃತಪಟ್ಟಿದ್ದಾಳೆ. ತಂದೆಯ ಕಿಡ್ನಿ ಹಾಕಿದ ನಂತರ ಪ್ರೀತಿ ನಿಧಾನವಾಗಿ ಚೇತರಿಸಿಕೊಂಡಿದ್ದಳು. ಆದರೆ ಪುನೀತ್ ಸಾವಿನ ಸುದ್ದಿ ಕೇಳಿ ಪ್ರೀತಿ ದಂಗುಬಡಿದವರಂತೆ ಆಗಿದ್ದಳು. ಊಟ ತಿಂಡಿ ಮಾಡುವುದನ್ನು ನಿಲ್ಲಿಸಿದ್ದಳು. ನಿತ್ಯ ಪುನೀತ್ ಫೋಟೊಗೆ ಪೂಜೆ ಸಲ್ಲಿಸುತ್ತಿದ್ದ ಪ್ರೀತಿಗೆ ಅವರಿಲ್ಲ ಎನ್ನುವ ವಿಷಯ ಅರಗಿಸಿಕೊಳ್ಳಲು ಆಗಿರಲಿಲ್ಲ.