Friday, September 26, 2025

ಈ ದೇವರಿಗೆ ಹೂವಲ್ಲ, ಕಲ್ಲುಗಳ ಸುರಿಮಳೆ! ಯಾಕೆ ಹೀಗೆ? ಏನಿದರ ಮಹತ್ವ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನವರಾತ್ರಿ ಸಮಯದಲ್ಲಿ ದೇವಿಯರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ದೇಗುಲದಲ್ಲಿ ದೇವಿಗೆ ಹೂವಿನ ಸುರಿಮಳೆಯಲ್ಲ! ಕಲ್ಲುಗಳನ್ನು ನೀಡುತ್ತಾರೆ.

ಇದು ಬಾಗದಾಯಿ ವನದೇವಿ ದೇವಾಲಯ. ಛತ್ತೀಸ್‌ಗಢದ ಬಿಲಾಸ್‌ಪುರದ ಸರ್ಕಂಡ ಪ್ರದೇಶದಲ್ಲಿದೆ. ಈ ದೇವಾಲಯವು ಇತರ ದೇವಾಲಯಗಳಿಗಿಂತ ಭಿನ್ನ. ಇಲ್ಲಿಗೆ ಬರುವ ಭಕ್ತರು ದೇವಿಗೆ ಕಲ್ಲುಗಳು ಮತ್ತು ಬೆಣಚುಕಲ್ಲುಗಳನ್ನು ಅರ್ಪಿಸುತ್ತಾರೆ. ದೇವಾಲಯದಲ್ಲಿ ಭಕ್ತರು ಹರಕೆ ಹೇಳಿಕೊಳ್ಳುತ್ತಾರೆ, ಬಯಸಿದ್ದು ಈಡೇರಿದ ನಂತರ ಹೊಲಗಳಿಂದ ಕಲ್ಲುಗಳನ್ನು ತಂದು ದೇವಿಗೆ ಅರ್ಪಿಸುತ್ತಾರೆ. ಅದೂ ಸಹ ಕೇವಲ ಐದು ಕಲ್ಲುಗಳನ್ನು ಮಾತ್ರ ಅರ್ಪಿಸಲಾಗುತ್ತದೆ. ಇದಲ್ಲದೆ, ಈ ದೇವಾಲಯದಲ್ಲಿ ಅಖಂಡ ಜ್ಯೋತಿ ಉರಿಯುತ್ತಲೇ ಇರುತ್ತದೆ.

ಸುಮಾರು 100 ವರ್ಷಗಳ ಹಿಂದೆ, ಈ ಪ್ರದೇಶದಲ್ಲಿ ದಟ್ಟವಾದ ಕಾಡು ಇತ್ತು. ಆಗ, ಇಲ್ಲಿ ವಾಸವಾಗಿದ್ದ ಒಬ್ಬ ಕುರುಬನಿಗೆ ಕನಸಿನಲ್ಲಿ ದೇವಿಯ ದರ್ಶನವಾಯಿತು. ಆಗ ಭಕ್ತನ ಕುರಿತು ಮಾತನಾಡಿದ ದೇವಿ, ನಾನು ಈ ಕಾಡಿನಲ್ಲಿಯೇ ಕುಳಿತಿರುವುದಾಗಿ ತಿಳಿಸಿದರು. ಆ ಮಾತಿನಂತೆ ಕುರುಬ ಅಲ್ಲಿಗೆ ಹೋದಾಗ ಅವನು ನಿಜವಾಗಿಯೂ ದೇವಿಯ ವಿಗ್ರಹವನ್ನು ನೋಡಿದನು. ಆದರೆ ತಾಯಿಯನ್ನು ಪೂಜಿಸಲು ತನ್ನ ಬಳಿ ಏನೂ ಇಲ್ಲ ಎಂದು ಹೇಳಿಕೊಂಡನು. ಆಗ ದೇವಿ, ಸುತ್ತಲೂ ಏನಿದೆಯೋ ಅದನ್ನೇ ಅರ್ಪಿಸುವಂತೆ ಹೇಳಿದರು. ಆಗ ಕುರುಬನು ಹೊಲದಲ್ಲಿ ಸಿಕ್ಕ ಕಲ್ಲುಗಳನ್ನು ಆಯ್ದು ತಂದು ತನ್ನ ತಾಯಿಗೆ ಅರ್ಪಿಸಿದನು. ಅಂದಿನಿಂದ, ಕಲ್ಲುಗಳನ್ನು ಅರ್ಪಿಸುವ ಸಂಪ್ರದಾಯ ಇಂದಿಗೂ ಮುಂದುವರೆದಿದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ