ಹೊಸದಿಗಂತ ಡಿಜಿಟಲ್ ಡೆಸ್ಕ್:
1999ರ ಕಾರ್ಗಿಲ್ ಪ್ರಾಂತ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಭೀಕರ ಯುದ್ಧವಾಗಿತ್ತು. ಈ ಭೀಕರ ಯುದ್ಧದಲ್ಲಿ ಭಾರತ ಜಯಗಳಿಸಿದೆ, ಆದರೆ ಯುದ್ಧದ ಸಂದರ್ಭದಲ್ಲಿ ನಮ್ಮ ಹಲವಾರು ಯೋಧರು ಹುತಾತ್ಮರಾಗಿದ್ದಾರೆ.
ಕಾರ್ಗಿಲ್ ಯುದ್ಧದ ಗೆಲುವನ್ನು ಸಂಭ್ರಮಿಸುವ ಹಾಗೂ ಹುತ್ಮಾತ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ನಡೆದು ಈ ವರ್ಷಕ್ಕೆ 25 ವರ್ಷಗಳಾಗಿವೆ.
1999ರ ಮೇ ಹಾಗೂ ಜುಲೈ ನಡುವೆ ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಯುದ್ಧ ನಡೆದಿತ್ತು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ವಿಜಯದ ಸ್ಮರಣಾರ್ಥ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನ ಎಂದು ಆಚರಿಸಲಾಗುತ್ತದೆ. ಈ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಒಂದಿಷ್ಟು ವಿಚಾರಗಳು ಇಲ್ಲಿವೆ…
ಲೈವ್ ಟೆಲಿಕಾಸ್ಟ್ ಆಗಿತ್ತು..
ಕಾರ್ಗಿಲ್ ಯುದ್ಧವು ದೇಶದ ಮೊದಲ ಯುದ್ಧವಾಗಿದ್ದು, ಇದನ್ನು ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಭಾರತೀಯ ಸುದ್ದಿ ವಾಹಿನಿಗಳಿಗೆ ಇದು ಹೊಸ ಥರದ ಅನುಭವ ನೀಡಿತ್ತು. ಅಂದರೆ ನೇರವಾಗಿ ಯುದ್ಧಭೂಮಿ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾಗಿತ್ತು. ಆದರೆ ನಂತರದ ದಿನಗಳಲ್ಲಿ ಸುದ್ದಿ ವಾಹಿನಿಗಳು ಇದನ್ನು ಪ್ರಸಾರ ಮಾಡಿದ್ದಕ್ಕಾಗಿ ಟೀಕೆಗೆ ಒಳಗಾದವು. ಕಾರ್ಗಿಲ್ ಯುದ್ಧಭೂಮಿಯು ಅತ್ಯಂತ ಎತ್ತರದ ಯುದ್ಧಭೂಮಿಯಾಗಿತ್ತು. 18,000 ಅಡಿಗಳಷ್ಟು ಎತ್ತರದಲ್ಲೂ ಯುದ್ಧ ನಡೆದಿತ್ತು. ಹವಾಮಾನ ವೈಪರೀತ್ಯದ ನಡುವೆಯೂ ನಡೆದ ಭೀಕರ ಯುದ್ಧಕ್ಕೆ ಕಾರ್ಗಿಲ್ ಸಾಕ್ಷಿಯಾಗಿತ್ತು.
ಆಪರೇಷನ್ ವಿಜಯ್: ಭಾರತೀಯ ಸೇನೆಯು ತನ್ನ ಕಾರ್ಯಾಚರಣೆಗೆ ʼಆಪರೇಷನ್ ವಿಜಯ್ʼ ಎಂಬ ಸಂಕೇತನಾಮವನ್ನು ನೀಡಿತ್ತು. ಪಾಕಿಸ್ತಾನವನ್ನು ಬಗ್ಗುಬಡಿದು ಕಾಶ್ಮೀರವನ್ನು ಉಳಿಸಿಕೊಳ್ಳುವ ಧೇಯ್ಯ ಹೊಂದಿತ್ತು ಆಪರೇಷನ್ ವಿಜಯ್. ಲಡಾಖ್ ಮತ್ತು ಕಾಶ್ಮೀರ ನಡುವಿನ ಸಂಪರ್ಕವನ್ನು ತೊಡೆದು ಹಾಕುವುದು ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವುದು ಪಾಕಿಸ್ತಾನದ ಪ್ರಮುಖ ಉದ್ದೇಶವಾಗಿತ್ತು.
ಭಾರತಕ್ಕೆ ಜಯ: ಭಾರತೀಯ ಸೇನೆಯು ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡಿ ವಿರೋಚಿತ ಜಯಗಳಿಸಿತ್ತು. ಆಕ್ರಮಿತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರಿಂದ ಈ ಯುದ್ಧವನ್ನು ಭಾರತಕ್ಕೆ ವಿಜಯವೆಂದು ಪರಿಗಣಿಸಲಾಗಿದೆ. ಯುದ್ಧವು ಸರಿಸುಮಾರು ಮೂರು ತಿಂಗಳ ಕಾಲ, ಅಂದರೆ ಮೇ ನಿಂದ ಜುಲೈವರೆಗೆ ನಡೆಯಿತು.
400 ರಿಂದ 4,000 ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಯುದ್ಧದಲ್ಲಿ 527 ಮಂದಿ ಭಾರತೀಯ ಸೈನಿಕರು ವೀರ ಮರಣ ಹೊಂದಿದ್ದರು. ಸುಮಾರು 1,363 ಮಂದಿ ಗಾಯಗೊಂಡಿದ್ದರು. ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವದಂದು, ಶಿಮ್ಲಾದ ಹೆಡ್‌ಕ್ವಾರ್ಟರ್ಸ್ ಆರ್ಮಿ ಟ್ರೈನಿಂಗ್ ಕಮಾಂಡ್ ಕಾರ್ಗಿಲ್ ವಿಜಯದ 25 ವರ್ಷಗಳ ಸ್ಮರಣಾರ್ಥ ಜುಲೈ 24-25 ರಂದು ದಿ ರಿಡ್ಜ್‌ನಲ್ಲಿ ‘ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ ಮಹೋತ್ಸವ’ವನ್ನು ಆಚರಿಸಲಿದೆ.
ಏತನ್ಮಧ್ಯೆ, ಕಾರ್ಗಿಲ್ ವಿಜಯ್ ದಿವಸ್‌ನ 25 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜುಲೈ 26 ರಂದು ಲಡಾಖ್‌ನ ಡ್ರಾಸ್‌ಗೆ ಭೇಟಿ ನೀಡಲಿದ್ದಾರೆ.