ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಜೀವನಾಡಿಗಳೇ ಈಗ ಕಲುಷಿತಗೊಂಡಿವೆ! ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಆಘಾತಕಾರಿ ವರದಿಯ ಪ್ರಕಾರ, ರಾಜ್ಯದ ಪ್ರಮುಖ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಇವುಗಳಲ್ಲಿ ಜೀವನದಿ ಕಾವೇರಿ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರ ಜೀವನಾಡಿ ಕೃಷ್ಣಾ ನದಿಗಳ ನೀರೂ ಸೇರಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.
ಕೃಷ್ಣಾ ನದಿ ‘ಸಿ’ ದರ್ಜೆಗೆ ಇಳಿಕೆ:
ಪ್ರಮುಖವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಜೀವಜಲವಾಗಿರುವ ಕೃಷ್ಣಾ ನದಿ, ಮಾಲಿನ್ಯದ ಕಾರಣದಿಂದ ‘ಸಿ’ ದರ್ಜೆಯಲ್ಲಿ ಗುರುತಿಸಿಕೊಂಡಿದೆ. ಅಂದರೆ, ಕೃಷ್ಣಾ ನದಿ ನೀರನ್ನು ಕಡ್ಡಾಯವಾಗಿ ಶುದ್ಧೀಕರಿಸಿದ ನಂತರವೇ ಕುಡಿಯಬೇಕು. ಇಲ್ಲವಾದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿ ಎಚ್ಚರಿಸಿದೆ.
ಕೈಗಾರಿಕಾ ತ್ಯಾಜ್ಯದಿಂದ ಕೃಷ್ಣೆಗೆ ಕಂಟಕ:
ಬಾಗಲಕೋಟೆ ಜಿಲ್ಲೆಯ ಒಂದೇ ಉದಾಹರಣೆಯನ್ನು ಗಮನಿಸಿದರೆ, ಕೃಷ್ಣಾ ನದಿಗೆ ಸೇರುತ್ತಿರುವ ಕಲ್ಮಶದ ಪ್ರಮಾಣ ಅರಿವಿಗೆ ಬರುತ್ತದೆ. ಸಕ್ಕರೆ ಕಾರ್ಖಾನೆಗಳಿಂದ ಹೊರಬೀಳುವ ತ್ಯಾಜ್ಯ ನೀರು, ಮನೆ-ಕೈಗಾರಿಕೆಗಳಿಂದ ಹೊರಬೀಳುವ ಮಲಿನ ನೀರು ಮತ್ತು ಚರಂಡಿಗಳ ಅಶುದ್ಧ ನೀರು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ಕೃಷ್ಣಾ ನದಿಯನ್ನು ಸೇರುತ್ತಿವೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಜನರಿಗೆ ಅಕ್ಷರಶಃ ಜೀವಜಲವಾಗಿರುವ ಕೃಷ್ಣಾ ನದಿ, ಈ ಎಲ್ಲ ಜಿಲ್ಲೆಗಳಲ್ಲಿ ಕಲುಷಿತವಾಗುತ್ತ ಸಾಗಿದೆ. ಕೇವಲ ಬಾಗಲಕೋಟೆಯ 205 ಹಳ್ಳಿಗಳಿಗೆ ಕೃಷ್ಣಾ ನದಿಯ ನೀರೇ ಮೂಲಾಧಾರವಾಗಿದ್ದು, ಈ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ನೋಡಲು ತಿಳಿಯಾಗಿ ಕಂಡರೂ, ಅಗೋಚರವಾಗಿರುವ ರಾಸಾಯನಿಕ ಮತ್ತು ಕಲ್ಮಶಗಳು ಜನರ ದೇಹ ಸೇರುತ್ತಿವೆ ಎಂಬ ಸಂಶಯ ಶುರುವಾಗಿದ್ದು, ಸ್ವಚ್ಛತೆ ವಿಚಾರದಲ್ಲಿ ಕೃಷ್ಣಾ ನದಿ ‘ಸಿ’ ದರ್ಜೆಗೆ ಇಳಿದಿರುವುದು ಗಂಭೀರ ವಿಷಯವಾಗಿದೆ.
ನೀರಿನ ಮಹತ್ವ:
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಲೇಶ್ವರದಲ್ಲಿ ಹುಟ್ಟುವ ಕೃಷ್ಣಾ ನದಿಯು ಕರ್ನಾಟಕದಲ್ಲಿ 483 ಕಿ.ಮೀ.ಗಳಷ್ಟು ದೂರ ಹರಿಯುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಮತ್ತು ಮೂರನೇ ಹಂತದಲ್ಲಿ ಒಟ್ಟು 21 ಲಕ್ಷ ಎಕರೆಗೂ ಅಧಿಕ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಈ ನದಿ ಲಕ್ಷಾಂತರ ಮಂದಿಯ ಬದುಕಿಗೆ ಆಧಾರವಾಗಿದೆ.
ಒಟ್ಟಿನಲ್ಲಿ, ರಾಜ್ಯದ ಪ್ರಮುಖ ನದಿಗಳ ನೀರೇ ಅಸುರಕ್ಷಿತ ಎಂಬ ಆಘಾತಕಾರಿ ಅಂಶ ಹೊರಬಿದ್ದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಜೀವಜಲಕ್ಕೆ ವಿಷಪ್ರಾಶನವಾಗುವುದನ್ನು ತಡೆಯಲು ಮತ್ತು ನದಿಗಳ ಶುದ್ಧೀಕರಣಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

 
                                    