ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಾಸ್ಯ ಮತ್ತು ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (60) ಅವರು ಅನಾರೋಗ್ಯದ ಕಾರಣ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ರಾಜು ತಾಳಿಕೋಟೆ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಜು ತಾಳಿಕೋಟೆ ಅವರ ನಿಧನಕ್ಕೆ ಚಿತ್ರರಂಗ ಮತ್ತು ರಂಗಭೂಮಿ ಕಂಬನಿ ಮಿಡಿದಿದೆ. ಅವರಿಗೆ ಸಿನಿಮಾದಲ್ಲಿ ದೊಡ್ಡ ಬ್ರೇಕ್ ನೀಡಿದ ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. “ನಮಸ್ತೆ, ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬಾ ಪ್ರೀತಿ, ತುಂಬಾ ಖುಷಿ, ತುಂಬಾ ನೆನಪು. ನೀವೊಬ್ಬ ನಾಡುಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ, ಇದು ಸಾವಲ್ಲ ನಿಮ್ಮ ಹುಟ್ಟು. ನಮನ + ಧನ್ಯವಾದ ರಾಜಣ್ಣ,” ಎಂದು ಅವರು ಬರೆದಿದ್ದಾರೆ.
ರಂಗಭೂಮಿ ಮತ್ತು ಸಿನಿಮಾ ಪಯಣ
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾದ ರಾಜು ತಾಳಿಕೋಟೆಯವರ ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ಅವರು ತಾಳಿಕೋಟೆಯಲ್ಲಿ ವಾಸವಾಗಿದ್ದರು. ಅವರು ಕೇವಲ ನಟನಾಗಿರದೆ, ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರೂ ಆಗಿದ್ದರು.
ಅವರ ವಿಶಿಷ್ಟ ಹಾಸ್ಯ ಶೈಲಿ, ಅದರಲ್ಲೂ ಮುಖ್ಯವಾಗಿ ಕುಡುಕನ ಪಾತ್ರಗಳಲ್ಲಿನ ಮನೋಜ್ಞ ಅಭಿನಯದಿಂದ ಉತ್ತರ ಕರ್ನಾಟಕದಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ‘ಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಆ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.
ಸಿನಿಮಾದಲ್ಲಿ ಪ್ರಸಿದ್ಧಿ
ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಅವರು ಚಲನಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದರು. ನಂತರ ಅವರು ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’, ಮತ್ತು ‘ಮೈನಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡರು. ಅವರು ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಇನ್ನಷ್ಟು ಜನಪ್ರಿಯರಾಗಿದ್ದರು.
ಅನಾರೋಗ್ಯದ ಕಾರಣದಿಂದಾಗಿ ಅವರು ಇತ್ತೀಚೆಗೆ ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಸಂತಾಪ ಸೂಚಿಸಿದೆ.