ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ನಗರದ ನಿವಾಸಿಗಳಿಗೆ 500 ರೂ. ದರದಲ್ಲಿ ಎಲ್ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್ ಮತ್ತು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಗುರುವಾರ ಗ್ಯಾರಂಟಿ ಘೋಷಿಸಿದೆ. .
ಎಐಸಿಸಿ ದೆಹಲಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಘೋಷಣೆ ಮಾಡಿದರು.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ತಾನು ನೀಡಿರುವ ಐದು ಭರವಸೆಗಳನ್ನು ಪೂರೈಸುತ್ತದೆ ಎಂದು ರೆಡ್ಡಿ ಹೇಳಿದರು.
ಜನವರಿ 6 ರಂದು ಕಾಂಗ್ರೆಸ್ ತನ್ನ ‘ಪ್ಯಾರಿ ದೀದಿ ಯೋಜನೆ’ಯನ್ನು ಘೋಷಿಸಿತು. ದೆಹಲಿಯಲ್ಲಿ ಗದ್ದುಗೆ ಏರಿದರೆ ಮಹಿಳೆಯರಿಗೆ ಮಾಸಿಕ 2,500 ರೂ. ನೀಡುವುದಾಗಿ ಹೇಳಿತ್ತು.
ಜನವರಿ 8 ರಂದು, ಪಕ್ಷವು ‘ಜೀವನ ರಕ್ಷಾ ಯೋಜನೆ’ಯನ್ನು ಘೋಷಿಸಿತು. ಅದರ ಅಡಿಯಲ್ಲಿ 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸುವುದಾಗಿ ಭರವಸೆ ನೀಡಿತು. ದೆಹಲಿಯಲ್ಲಿರುವ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 8,500 ರೂಪಾಯಿಗಳನ್ನು ಒಂದು ವರ್ಷದವರೆಗೆ ನೀಡುವುದಾಗಿ ಭಾನುವಾರ ಪಕ್ಷ ಭರವಸೆ ನೀಡಿದೆ.