April 12, 2026
Sunday, April 12, 2026
spot_img

ದೇಶದಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಇದು ಸೂಕ್ತ ಸಮಯ: ಸರ್ವಪಕ್ಷಗಳಿಗೆ ಪ್ರಧಾನಿ ಮೋದಿ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಗೆ ಸೂಕ್ತ ಸಮಯ ಬಂದಿದ್ದು, ಎಲ್ಲರೂ ಬೆಂಬಲಿಸುವಂತೆ ಸರ್ವಪಕ್ಷಗಳಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದಾರೆ.

ಏಪ್ರಿಲ್ 16ರಿಂದ ಸಂಸತ್ ನಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಹೀಗಾಗಿ ಈ ವೇಳೆ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಜಾರಿಗೆ ಸಂಬಂಧಿಸಿ ಕಾನೂನು ಅಂಗೀಕರಿಸಲು ಬೆಂಬಲ ನೀಡುವಂತೆ ಕೋರಿದ್ದಾರೆ.

ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಸಂಬಂಧಿಸಿದ ಐತಿಹಾಸಿಕ ಚರ್ಚೆ ನಡೆಯಲಿದೆ. ಈ ವೇಳೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲು ಒಳ್ಳೆಯ ಕ್ಷಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2029ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸಬೇಕು. ಇದರಿಂದ ಮಹಿಳೆಯರು ಪ್ರಗತಿ ಸಾಧಿಸಲು, ಜೊತೆಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಸಿಗಲಿದೆ. ಈ ಮೂಲಕ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೃಷ್ಟಿಕೋನವು ಸಾಕಾರಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇಂದು ನಾವು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನುನೋಡುತ್ತಿದ್ದೇವೆ.ಅಂತರಿಕ್ಷದಿಂದ ಕ್ರೀಡೆಗಳವರೆಗೆ, ಸೈನ್ಯದಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದರು.

ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿಯನ್ನು ಅಂಗೀಕರಿಸಲು ನಿಮ್ಮ ಸಹಕಾರಕ್ಕೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನಾವೆಲ್ಲರೂ ಒಂದೇ ಧ್ವನಿಯಲ್ಲಿ ಒಗ್ಗೂಡಬೇಕಿದ್ದು, ಈ ಮೂಲಕ ಸಂಸತ್ತಿನ ವಿಶೇಷ ಅಧಿವೇಶನವು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !