Monday, December 8, 2025

ಸ್ವಾತಂತ್ರ್ಯ ಚಳವಳಿಗೆ ಉಸಿರು ತುಂಬಿತ್ತು ಈ ಗೀತೆ: ಲೋಕಸಭೆಯಲ್ಲಿ ‘ವಂದೇ ಮಾತರಂ’ಗೆ ಪ್ರಧಾನಿ ಮೋದಿ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಜನರ ಮನಸ್ಸಿಗೆ ಕಿಚ್ಚು ಹಚ್ಚಿದ ಪದಗಳೇ ‘ವಂದೇ ಮಾತರಂ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಗೆ ಚಾಲನೆ ನೀಡಿದ ಅವರು, ಈ ಗೀತೆ ಬ್ರಿಟಿಷರ ಎದುರು ನಿಂತ ಬಂಡೆಯಂತೆ ಕಾರ್ಯನಿರ್ವಹಿಸಿತು ಎಂದು ಸ್ಮರಿಸಿದರು.

ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಅದು ಬಲಿದಾನ, ಧೈರ್ಯ ಮತ್ತು ಸ್ವಾತಂತ್ರ್ಯದ ಮಂತ್ರವಾಗಿತ್ತು. ಬ್ರಿಟಿಷ್ ಆಡಳಿತದ ದೌರ್ಜನ್ಯ ಮತ್ತು ಒತ್ತಡದ ನಡುವೆಯೂ ಈ ಘೋಷಣೆ ಭಾರತೀಯರಲ್ಲಿ ಏಕತೆ ಮತ್ತು ಆತ್ಮಗೌರವ ಬೆಳೆಸಿತು ಎಂದರು. 1882ರಲ್ಲಿ ಬಂಕಿಮ್ ಚಂದ್ರ ಚಟರ್ಜಿ ತಮ್ಮ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಿದ ಈ ಗೀತೆ, ಕ್ಷಣಕಾಲದಲ್ಲೇ ಸ್ವಾತಂತ್ರ್ಯ ಚಳವಳಿಯ ಯುದ್ಧಘೋಷವಾಗಿ ರೂಪುಗೊಂಡಿತು ಎಂದು ವಿವರಿಸಿದರು.

1906ರಲ್ಲಿ ಬಾರಿಸಾಲ್‌ನಲ್ಲಿ ನಡೆದ ವಂದೇ ಮಾತರಂ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದ ಘಟನೆ ಉಲ್ಲೇಖಿಸಿದ ಪ್ರಧಾನಿ, ಹಿಂದೂ-ಮುಸ್ಲಿಮರು ಸೇರಿದಂತೆ ಎಲ್ಲ ವರ್ಗದ ಜನರು ಒಂದೇ ಧ್ವಜದಡಿ ಸೇರಿದ್ದದ್ದು ಈ ಗೀತೆಯ ಶಕ್ತಿಯನ್ನು ತೋರಿಸುತ್ತದೆ ಎಂದರು. ವಂದೇ ಮಾತರಂ ಹಾಡಿದಕ್ಕಾಗಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಬ್ರಿಟಿಷರ ಕ್ರಮವೇ, ಈ ಗೀತೆಯ ಪ್ರಭಾವ ಎಷ್ಟಿತ್ತು ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ವಂದೇ ಮಾತರಂ ರಾಜಕೀಯ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಲ್ಲ, ಅದು ಭಾರತಮಾತೆಯನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸುವ ಪವಿತ್ರ ಸಂಕಲ್ಪವಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

error: Content is protected !!