ಹೊಸದಿಗಂತ ಡಿಜಿಟಲ್ ಡೆಸ್ಕ್:
2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲು ಸಜ್ಜಾಗಿರುವ ಶಿಕ್ಷಣ ಇಲಾಖೆಯು ಕೆಲ ಜಿಲ್ಲೆಗಳ ಹವಾಮಾನ ಅನುಗುಣವಾಗಿ ಚಪ್ಪಲಿಗಳನ್ನು ನೀಡಲು ಚಿಂತನೆ ನಡೆಸಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ತಲಾ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ವಿತರಿಸಲಿದೆ.
1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಲಾ 265 ರೂ ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ. ಹಾಗೂ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ. ದರ ನಿಗದಿಪಡಿಸಲಾಗಿದೆ. ಆಯಾ ಜಿಲ್ಲೆಗಳ ವಾತಾವರಣಕ್ಕೆ ಅನುಗುಣವಾಗಿ ಶೂ, ಸಾಕ್ಸ್ ಮತ್ತು ಚಪ್ಪಲಿಗಳನ್ನು ವಿತರಿಸಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸೂಚನೆ ನೀಡಿದೆ.
2026ನೇ ಸಾಲಿನಲ್ಲಿಎಸ್‌ಎಟಿಎಸ್ ತಂತ್ರಾಂಶದಲ್ಲಿವಿದ್ಯಾರ್ಥಿಗಳ ದಾಖಲಾತಿಯ ಮಾಹಿತಿ ಆಧರಿಸಿ ಶೂ, ಸಾಕ್ಸ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಕೆಲವೆಡೆ ಅತಿ ಹೆಚ್ಚು ಮಳೆ ಬೀಳುವುದರಿಂದ ಹಾಗೂ ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಶೂ ಬದಲು ಚಪ್ಪಲಿ ವಿತರಿಸಲು ಉದ್ದೇಶಿಸಲಾಗಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿಮಕ್ಕಳು ಶೂ, ಸಾಕ್ಸ್ ಧರಿಸಿ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೂ, ಸಾಕ್ಸ್ ಬದಲು ಚಪ್ಪಲಿಗೆ ಎಲ್ಲೆಲ್ಲಿಯೂ ಹೆಚ್ಚಿನ ಬೇಡಿಕೆಯಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲು ತೀರ್ಮಾನಿಸಲಾಗಿದೆ. ಇನ್ನು ಶೂ, ಸಾಕ್ಸ್ ಗುಣಮಟ್ಟ ಪರಿಶೀಲನೆಗೆ ಆಯಾ ಜಿಲ್ಲಾಪಂಚಾಯಿತಿಗಳ ನಿರ್ವಹಣಾ ಅಧಿಕಾರಿಗಳ ಮೂಲಕ ಸಮಿತಿ ರಚಿಸಲು ಸೂಚಿಸಿರುವ ಇಲಾಖೆಯು, ಚಪ್ಪಲಿಗಳಿಗೆ ಬೇಡಿಕೆ ಇರುವೆಡೆ ಅವುಗಳನ್ನೇ ವಿತರಿಸಲು ನಿರ್ಧರಿಸಿದೆ.
ಮಳೆ, ಬೇಸಿಗೆ ವೇಳೆ ಧರಿಸಲು ಸುಲಭವಾಗಲು, ದೀರ್ಘಕಾಲ ಶೂ ಧರಿಸುವಿಕೆಯಿಂದ ಆಗಬಹುದಾದ ಸೋಂಕುಗಳಿಗೆ ಕಡಿವಾಣ ಹಾಕಲು, ಪಾದದ ಅಳತೆಗೆ ಶೂಗಿಂತ ಚಪ್ಪಲಿ ಸೂಕ್ತ ಎಂಬ ಲೆಕ್ಕಾಚಾರದಿಂದ ಈ ಬಾರಿ ಶೂ ಬದಲು ಚಪ್ಪಲಿಗೆ ಮಣೆ ಹಾಕಲಾಗಿದೆ.


