ಈ ಬಾರಿ ಅಭ್ಯರ್ಥಿಗಳಿಗಿಂತ ದೇಶ ಮುಖ್ಯ: ಮಾಜಿ ಸಚಿವ ವಿ.ಸೋಮಣ್ಣ

ಹೊಸದಿಗಂತ ವರದಿ,ಚಿತ್ರದುರ್ಗ:

ವಿಧಾನ ಸಭಾ ಚುನಾವಣೆ ಬೇರೆ ಹಾಗೂ ಲೋಕಸಭಾ ಚುನಾವಣೆ ಬೇರೆ, ಇಲ್ಲಿ ನಾವ್ಯಾರು ಮುಖ್ಯವಲ್ಲ, ದೇಶ ಮುಖ್ಯವಾಗುತ್ತದೆ. ಇಲ್ಲಿ ನರೇಂದ್ರ ಮೋದಿ ಮುಖ್ಯ ಹಾಗೆ ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಲ್ಲಿಯೂ ಇದೆ. ಭಾರತವನ್ನು ಮತ್ತೊಮ್ಮೆ ವಿಕಸಿತದ ಕಡೆಗೆ ಕೊಂಡೊಯ್ಯಲು ೧೪೨ ಕೋಟಿ ಜನ ಮೋದಿ ಪರ ಮತ ಚಲಾಯಿಸುತ್ತಾರೆ. ಅರ್ಥ ಮಾಡಿಕೊಂಡು ನಾವು ಹೆಜ್ಜೆ ಇಡುವುದು ಒಳ್ಳೆಯದು ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು.

ಚಿತ್ರದುರ್ಗದ ನಗರದಲ್ಲಿ ಮಾತನಾಡಿದ ಅವರು, ನಾನು ಏಳು ಬಾರಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಒಂದು ದೇಶವನ್ನು ಹೇಗೆ ಆಡಳಿತ ಮಾಡಬೇಕು ಎಂದು ತೋರಿಸಿದ ಮೋದಿಯವರನ್ನು ಇಡೀ ವಿಶ್ವವೇ ಮೆಚ್ಚಿದೆ. ಕರ್ನಾಟಕದ ಜನರು ಮೆಚ್ಚಿದ್ದು, ಮೂರನೇ ಬಾರಿ ಮೋದಿ ಪ್ರಧಾನಿಯಾಗಲು ಎಲ್ಲರೂ ಅವಕಾಶ ನೀಡುತ್ತಾರೆ ಎಂಬುದು ನನ್ನ ಅಚಲ ವಿಶ್ವಾವಾಗಿದೆ ಎಂದರು.

ಟಿಕೆಟ್ ವಂಚಿತರು ಯಾವ ಪಕ್ಷದ ಕಡೆ ಮುಖ ಮಾಡಲಿ ಅದು ಗೌಣ. ಇದು ದೇಶದ ಪ್ರಶ್ನೆ,ಟಿಕೆಟ್ ಕೊಡುವಾಗ ೨೮ ಸ್ಥಾನಗಳಿಗೆ ೨೯ ಕೊಡಲು ಸಾಧ್ಯವಿಲ್ಲ, ಅದನ್ನು ಹೇಗೆ ಕೊಡಬೇಕು ಎಂದು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ತುಮಕೂರಿಗೆ ಬರಲು ಕಾರಣವಿದೆ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧವಿದೆ. ನಾನು ಅನೇಕ ಬಾರಿ ತುಮಕೂರಿನ ಬಗ್ಗೆ ಬೆಳಕನ್ನು ಚೆಲ್ಲಿದ್ದೇನೆ. ನಾನು ಮೂರು ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ, ಶ್ರೀ ಕ್ಷೇತ್ರ ವಿಶ್ವದ ಮಟ್ಟಕ್ಕೆ ತಲುಪಲು ನನ್ನ ಅಳಿಲು ಸೇವೆ ಇದೆ. ಇದೆಲ್ಲವನ್ನು ಮನಗಂಡು ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ ಎಂದರು.

ನಾನು ಮೊದಲು ಹೇಳಿದ್ದೇ ಈಗಲೂ ಹೇಳುತ್ತಿದ್ದೇನೆ. ಬೇರೆ ಯಾರಿಗೆ ಟಿಕೆಟ್ ನೀಡಿದರೂ ನಾನು ಕೆಲಸ ಮಾಡುತ್ತೇನೆ. ಪಕ್ಷ ಎಲ್ಲವನ್ನು ಕೊಟ್ಟಿದೆ.ಅದನ್ನು ಮನಗಂಡು ದೇಶಕ್ಕಾಗಿ ಎಲ್ಲವನ್ನು ಬಿಟ್ಟು ಕೆಲಸ ಮಾಡಬೇಕಿದೆ. ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ಬರುತ್ತೇನೆಂದು ಕೇಳಿದೆ ಬರಬೇಡ ಎಂದಿದ್ದಾರೆ. ಮತ್ತೊಮ್ಮೆ ಕೇಳುತ್ತೇನೆ. ಬಾ ಅಂದರೆ ಹೋಗುತ್ತೇನೆ ಎಂದು ಹೇಳಿದರು.

ನನ್ನಂತ ಹಿರಿಯ ಇನ್ನೇನು ಮಾಡಲು ಸಾಧ್ಯ ಮಾಧುಸ್ವಾಮಿಗೆ ಟಿಕೆಟ್ ಕೊಟ್ಟಿದ್ದರೂ ಕೂಡ ಸೊಮಣ್ಣ ಬೇಕಿತ್ತು. ಬಸವರಾಜ್ ಗೆ ಟಿಕೆಟ್ ಕೊಟ್ಟಾಗ ಹೇಗೆ ಕೆಲಸ ಮಾಡಿದ್ದೇನೆಂದು ಜಿಲ್ಲೆಯ ಜನರಿಗೆ ಗೊತ್ತಿದೆ. ಆದ್ದರಿಂದ ಮಾಧುಸ್ವಾಮಿ ಅವರು ಬುದ್ದಿವಂತರು ಪ್ರಜ್ಞಾನವಂತರು, ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾಗಿದ್ದವರು, ಅವರ ತೀರ್ಮಾನ ಏನು ಎಂದು ಗೊತ್ತಿಲ್ಲ, ನಾನು ಮತ್ತೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ಈಶ್ವರಪ್ಪ ನುರಿತ ರಾಜಕಾರಣಿ ಅವರೇನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಅವರಿಗೆ ನೋವಾಗಿದೆ.ಎರಡು ಮೂರು ದಿನಗಳಲ್ಲಿ ಸರಿಯಾಗುತ್ತದೆ. ಈಶ್ವರಪ್ಪ ಅವರು ನಮ್ಮ ಬೆನ್ನೆಲುಬು ಅವರಿಗಾಗಿರುವ ನೋವನ್ನು ಶಮನ ಮಾಡಲು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಿದ್ದಾರೆ ಎಂದರು.

ಈ ಸಮಯದಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ, ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!