ಈ ಬಾರಿ ಹೊಸ ಮುಖಗಳಿಗೆ ಟಿಕೇಟ್: ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ, ಬಳ್ಳಾರಿ:

ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ, ಪಾದಯಾತ್ರೆಯಲ್ಲಿ ಅವರು ಕೈಗೊಂಡ ಸೇವೆ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಟಿಕೇಟ್ ನೀಡಲಾಗುವುದು, ಈ ಬಾರಿ ಹೊಸ ಮುಖಗಳಿಗೂ ಟಿಕೇಟ್ ನಿಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತಾಲೂಕಿನ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಸರ್ವೆ ಮಾಡಿದ ವರದಿಗಳು ಕೈ ಸೇರಿದ್ದು, 150 ಜನರಿಗೆ ಟಿಕೇಟ್ ಮೊದಲೇ ಘೋಷಣೆ ಮಾಡುವ ಹಂತ ಪೂರ್ಣಗೊಂಡಿದೆ. ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ, ಪ್ರೋತ್ಸಾಹ ವ್ಯಕ್ತವಾಗಿದೆ. ಇದನ್ನು ಕಂಡು ಬಿಜೆಪಿ ಅವರಿಗೆ ನಡುಕ ಶುರುವಾಗಿದೆ, ಈ ಹಿನ್ನೆಲೆಯಲ್ಲಿ ನಮ್ಮ ಬಗ್ಗೆ ಮನಬಂದಂತೆ ಮಾತಾಡುತ್ತಿದ್ದಾರೆ, ಬರುವ ಚುನಾವಣೆಯಲ್ಲಿ ನಾವಲ್ಲ ರಾಜ್ಯದ ಪ್ರಭುದ್ದ ಜನರೇ ಬಿಜೆಪಿ ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸ್ವಯಂಪ್ರೇರಿತವಾಗಿ ಜನರು ಯಾತ್ರೆಯಲ್ಲಿ ಭಾಗವಹಿಸಿ‌ ಪ್ರೋತ್ಸಾಹಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ. ಬಳ್ಳಾರಿ ಮೂಲಕ ಆಂದ್ರದ ಗಡಿ ತಲುಪಿದ್ದೇವೆ, ನಂತರ ಪ್ರಸಿದ್ಧ ಶ್ರೀ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮೀ ಸನ್ನಿಧಾನ ಮಂತ್ರಾಲಯಕ್ಕೆ ತೆರಳಲಿದ್ದೇವೆ, ಹಣನೀಡಿ ಜನರನ್ನು ಪಾದಯಾತ್ರೆಯಲ್ಲಿ ಕರೆ ತಂದಿದ್ದಾರೆ ಎನ್ನುವುದು ಶುದ್ಧ ಸುಳ್ಳು, ಅಪಪ್ರಚಾರದ ಕೆಲಸ ಇದಾಗಿದೆ, ರಾಜ್ಯದ ಜನರು ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಸ್ವಯಂಪ್ರೇರಿತವಾಗಿ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ, ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆ ಜನರು ಬೇಸತ್ತಿದ್ದು, ಯಾತ್ರೆಯಲ್ಲಿ ಜನವೋ ಜನ ಭಾಗವಹಿಸುತ್ತಿದ್ದಾರೆ, ನಮ್ಮ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ನಮಗೆ ದೊರೆತಿದೆ ಎಂದರು. ಯುವ ನಾಯಕ ರಾಹುಲ್ ಗಾಂಧಿ, ಹಾಗೂ ನನ್ನ ಬಗ್ಗೆ ಬಿಜೆಪಿಯ ಶ್ರೀರಾಮುಲು ಸೇರಿ ಇತರರು ನಮ್ಮ ಬಗ್ಗೆ ಎಷ್ಟೇ ಅಪಪ್ರಚಾರ ನಡೆಸಿದರೂ ನಮಗೆ ತೊಂದರೆ ಇಲ್ಲ, ಅವರೇನೆ ಮಾತಾಡಿದ್ರು, ಜನರು ನಮ್ಮ ಕಾಂಗ್ರೆಸ್ ಪರವಾಗಿದ್ದಾರೆ, ನಮ್ಮೊಂದಿಗೆ ಜನರಿದ್ದಾರೆ, ಬಿಜೆಪಿ ಅವರ ಸರ್ಟಿಫಿಕೇಟ್ ‌ನಮಗೆ ಬೇಕಿಲ್ಲ ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!