ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು,ಈ ಹಿನ್ನೆಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು, ಪ್ರಧಾನಿ ಮೋದಿ ಸಾಥ್ ನೀಡಿದ್ದಾರೆ.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) 4 ರಾಜ್ಯಗಳ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಾರಿಶಕ್ತಿಯ ವಿಕಾಸವೇ ಬಿಜೆಪಿಯ ಆಧಾರಸ್ತಂಭವಾಗಿದೆ. ನಿಮಗೆ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಇದು ಮೋದಿಯ ಕೇವಲ ಗ್ಯಾರಂಟಿ ಅಲ್ಲ, ಪೂರ್ಣಗೊಳಿಸುವ ಗ್ಯಾರಂಟಿ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಧನ್ಯವಾದ ಹೇಳಿದ ಮೋದಿ, ತೆಲಂಗಾಣ ಜನತೆಗೂ ಧನ್ಯವಾದ ಹೇಳಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ತೆಲಂಗಾಣದಲ್ಲಿ ಬಿಜೆಪಿಯನ್ನು ಮತ್ತಷ್ಟು ಶಕ್ತಿಯುತವಾಗಿ ಬೇರೂರುವಂತೆ ಮಾಡಿದ್ದೀರಿ. ತೆಲಂಗಾಣ ಜನತೆಯೊಂದಿಗೆ ಸದಾ ಬಿಜೆಪಿ ನಿಲ್ಲಲಿದೆ ಎಂದು ಮೋದಿ ಹೇಳಿದ್ದಾರೆ.
ಇಂದಿನ ವಿಜಯವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಇಂದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಕಲ್ಪನೆಯು ಗೆದ್ದಿದೆ, ಆತ್ಮ ನಿರ್ಭರ ಭಾರತದ ದೃಢ ಸಂಕಲ್ಪ ಗೆದ್ದಿದೆ, ವಂಚಿತರಿಗೆ ಆದ್ಯತೆಯ ವಿಚಾರ ಗೆದ್ದಿದೆ ಹಾಗೂ ದೇಶದ ಅಭಿವೃದ್ಧಿಗಾಗಿ ರಾಜ್ಯಗಳ ಅಭಿವೃದ್ಧಿಯ ಕಲ್ಪನೆಗೆ ಜಯ ಸಿಕ್ಕಿದೆ. ಈ ಮೂರು ರಾಜ್ಯಗಳು ಗೆಲುವು 2024ರ ಲೋಕಸಭೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಗ್ಯಾರೆಂಟಿ ಎಂದು ಕೆಲವರು ಹೇಳುತ್ತಿದ್ದಾರೆ ಎಂದರು.
ಇಂದು ಪ್ರತಿಯೊಬ್ಬ ಬಡವ ತಾನೂ ಗೆದ್ದೆ ಎಂದು ಹೇಳುತ್ತಿದ್ದಾರೆ. ಪ್ರತಿಯೊಬ್ಬ ವಂಚಿತ ವ್ಯಕ್ತಿಯ ಮನಸ್ಸಿನಲ್ಲಿ ತಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂಬ ಭಾವನೆ ಇರುತ್ತದೆ. ಈ ಚುನಾವಣೆಯಲ್ಲಿ ಗೆದ್ದೆ ಎಂದು ಪ್ರತಿಯೊಬ್ಬ ರೈತರು ಹೇಳುತ್ತಾರೆ. ಇಂದು ಬುಡಕಟ್ಟು ಸಮುದಾಯದ ಪ್ರತಿಯೊಬ್ಬ ಸಹೋದರ-ಸಹೋದರಿಯರು ಗೆಲುವು ತನ್ನದೆಂದು ಭಾವಿಸಿ ಸಂತೋಷಪಡುತ್ತಿದ್ದಾರೆ. ನನ್ನ ಮೊದಲ ಮತ ನನ್ನ ಗೆಲುವಿಗೆ ಕಾರಣ ಎಂದು ಮೊದಲ ಬಾರಿಗೆ ಮತದಾನ ಮಾಡಿದ ಮತದಾರ ಹೆಮ್ಮೆಯಿಂದ ಹೇಳುತ್ತಾನೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುವ ಪ್ರಯತ್ನಗಳು ನಡೆದಿವೆ. ಆದ್ರೆ ನನಗೆ ನಾರಿ ಶಕ್ತಿ, ಯುವ ಶಕ್ತಿ, ಕಿಸಾನ್ ಮತ್ತು ಗರೀಬ್ ಪರಿವಾರ ಎಂಬ ನಾಲ್ಕು ಜಾತಿಗಳು ಮುಖ್ಯ ಎಂದು ನಾನು ಹೇಳುತ್ತಲೇ ಇದ್ದೆ. ದೇಶದ ‘ನಾರಿ ಶಕ್ತಿ’ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿಯ ಬಾವುಟ ಉತ್ತುಂಗಕ್ಕೇರಲಿದೆ ಎಂದು ‘ನಾರಿ ಶಕ್ತಿ’ ನಿರ್ಧರಿಸಿದೆ ಎಂದು ನಾನು ಭಾಗವಹಿಸಿದ ಸಮಾವೇಶಗಳಲ್ಲಿ ಆಗಾಗ ಹೇಳುತ್ತಿದ್ದೆ. ಅದು ಇಂದು ನಿಜವಾಗಿದೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ, ನಾನು ಯಾವಾಗಲೂ ಭವಿಷ್ಯವಾಣಿಗಳಿಂದ ದೂರವಿದ್ದೇನೆ. ಆದರೆ, ಈ ಬಾರಿ ನಾನು ಈ ನಿಯಮವನ್ನು ಮುರಿದಿದ್ದೇನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ವಾಪಸಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದೆ. ಅದು ನಿಜವಾಗಿದೆ. ಏಕೆಂದರೆ, ರಾಜಸ್ಥಾನದ ಜನರ ಮೇಲೆ ನನಗೆ ವಿಶ್ವಾಸವಿತ್ತು ಎಂದು ಹೇಳಿದರು.