March 26, 2026
Thursday, March 26, 2026
spot_img

IPL ಉದ್ಘಾಟನಾ ಸಮಾರಂಭಕ್ಕೆ ಕಾಯ್ತಾ ಇರೋರಿಗೆ ನಿರಾಸೆ: ಖಡಕ್ ನಿರ್ಧಾರ ತೆಗೆದುಕೊಂಡ ಬಿಸಿಸಿಐ! ಏನದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಪ್ರಿಯರ ಬಹುಕಾಲದ ನಿರೀಕ್ಷೆಗೆ ತೆರೆ ಬೀಳಲು ಇನ್ನೇನು 2 ದಿನ ಬಾಕಿ. 2026ರ ಐಪಿಎಲ್ ಟೂರ್ನಿ ಈ ಬಾರಿ ವಿಭಿನ್ನವಾಗಿ ಆರಂಭವಾಗಲಿದೆ. ಸಾಮಾನ್ಯವಾಗಿ ಭರ್ಜರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುವ ಲೀಗ್, ಈ ಬಾರಿ ಯಾವುದೇ ಕಾರ್ಯಕ್ರಮವಿಲ್ಲದೆ ಶುರುವಾಗುತ್ತಿದೆ.

ಹೌದು! ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸಾಮಾನ್ಯವಾಗಿ ನಡೆಯುವ ಉದ್ಘಾಟನಾ ಸಮಾರಂಭ ಈ ಬಾರಿ ಇರುವುದಿಲ್ಲ.

ಈ ಬಾರಿ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸುವ ಮೂಲಕ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಆ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಗೌರವಾರ್ಥ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:

ಹೀಗಾಗಿ ಈ ಬಾರಿ ಯಾವುದೇ ಭವ್ಯ ಕಾರ್ಯಕ್ರಮಗಳನ್ನು ನಡೆಸದೆ ಸರಳವಾಗಿ ಟೂರ್ನಿಯನ್ನು ಆರಂಭಿಸಲಾಗುತ್ತಿದೆ. ಆದರೆ ಟೂರ್ನಿಯ ಕೊನೆಯ ದಿನವಾದ ಮೇ 31ರಂದು ಸಮಾರೋಪ ಸಮಾರಂಭ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಐಪಿಎಲ್ ಇತಿಹಾಸದಲ್ಲಿಯೂ ಇಂತಹ ಘಟನೆ ಇದು ಮೊದಲಲ್ಲ. ಪುಲ್ವಾಮಾ ದಾಳಿ ಬಳಿಕ 2019ರಲ್ಲಿ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು. ಆಗ ಸಮಾರಂಭಕ್ಕೆ ಮೀಸಲಾದ ಹಣವನ್ನು ಹುತಾತ್ಮರ ಕುಟುಂಬಗಳಿಗೆ ನೀಡಲಾಗಿತ್ತು.

ಒಟ್ಟಿನಲ್ಲಿ, ಈ ಬಾರಿ ಐಪಿಎಲ್ ಭಾವನಾತ್ಮಕ ನಿರ್ಧಾರಗಳೊಂದಿಗೆ ಆರಂಭವಾಗಲಿದೆ ಎನ್ನಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !