- ಐ.ಬಿ. ಸಂದೀಪ್ ಕುಮಾರ್
ಪುತ್ತೂರು: ಮಳೆಗಾಲ ಬಂತೆಂದರೆ ಜನರಿಗೆ ಪ್ರವಾಹದ ಜತೆ ಗುಡುಗು ಸಿಡಿಲಿನ ಚಿಂತೆ ಒಂದೆಡೆಯಾದರೆ ಗ್ರಾಮೀಣ ಮಂದಿಗೆ ಕೃಷಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ಮಾಡುವ ಸವಾಲು. ಅತಿವೃಷ್ಟಿಯಾದರೆ ರೈತರಿಗೆ ಕೃಷಿ ಹಾನಿಯ ಚಿಂತೆಯಾದರೆ ನಗರ, ಪಟ್ಟಣಗಳ ನಾಗರಿಕರಿಗೆ ನಿರಾತಂಕ ಓಡಾಟದ ಸಮಸ್ಯೆ. ಮಳೆ ಬಾರದಿದ್ದರೆ ನೀರಿಲ್ಲದ ಆತಂಕ, ನಿರಂತರ ಬಂದರೆ ನೀರಿನದ್ದೇ ತೊಂದರೆ. ಪ್ರವಾಹದಲ್ಲಿ ಸಿಲುಕಿ ನರಕಯಾತನೆಯನ್ನು ಅನುಭವಿಸಿದರನ್ನು ನೋಡಿದವರು ಯಾರಿಗೂ ಇಂಥ ಪರಿಸ್ಥಿತಿ ಎದುರಿಸಬಾರದು ಎನ್ನುವ ಕಾಳಜಿ ಉಂಟಾಗುವುದು ಸಾಮಾನ್ಯ. ಆದರೆ, ದೈನಂದಿನ ಆದಾಯಕ್ಕಾಗಿ ಪ್ರವಾಹಕ್ಕಾಗಿಯೇ ಕಾದು ಕುಳಿತುಕೊಳ್ಳುವ ಜನರಿದ್ದಾರೆ ಎಂದರೆ ವಿಶೇಷವೆನ್ನಿಸದಿರಲಾರದು.
ಹಳ್ಳ ತೊರೆಗಳೇ ಮೂಲ
ಮಳೆಗಾಲದಲ್ಲಿ ಪ್ರವಾಹ ಬಂದು ಮನೆ-ಮಠ ಕಳೆದುಕೊಳ್ಳುವವರ ಕರುಣಾಜನಕ ಕಥೆ ಒಂದು ಕಡೆಯಾದರೆ, ಇನ್ನೊಂದು ಕಡೆ ಮಳೆಗಾಲದಲ್ಲಿ ಪ್ರವಾಹವನ್ನೇ ತಮ್ಮ ದೈನಂದಿನ ಆದಾಯ ಮಾಡಿಕೊಂಡ ಕುಟುಂಬಗಳಿವೆ. ಅದರಲ್ಲೂ ತೆಂಗು, ಅಡಿಕೆ ತೋಟಗಳೇ ಹೆಚ್ಚಾಗಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಹಳ್ಳ ಕೊಳ್ಳಗಳಿವೆ. ಕೃಷಿ ತೋಟಗಳ ಪಕ್ಕದಲ್ಲೇ ಹರಿಯುವ ಈ ಹಳ್ಳ ತೊರೆಗಳು ಮಳೆಗಾಲದಲ್ಲಿ ತುಂಬಿ ಹರಿದು, ಕೃಷಿ ತೋಟಗಳಿಗೂ ನುಗ್ಗುತ್ತವೆ. ಹೀಗೆ ಕೃಷಿ ತೋಟಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ತೋಟದಲ್ಲಿ ಬಿದ್ದ ತೆಂಗಿನಕಾಯಿ, ಅಡಿಕೆ ಇನ್ನಿತರ ಕೃಷ್ಯುತ್ಪನ್ನಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ಈ ರೀತಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುವ ತೆಂಗು, ಅಡಿಕೆಗಳನ್ನು ಹಿಡಿಯಲು ಕಿರುವ ಸೇತೆವೆಗಳ ಮೇಲೆ ಬೇಟೆಗಾರರು ಕೈಯಲ್ಲಿ ಬಲೆ ಕಟ್ಟಿದ ಕೋಲನ್ನು ಹಿಡಿದುಕೊಂಡು ಕಾದು ಕುಳಿತುಕೊಳ್ಳುತ್ತಾರೆ.
ಸಾಹಸಮಯ ಕಾರ್ಯ
ಹಳ್ಳ-ತೊರೆಗಳಿಗೆ ನಿರ್ಮಿಸಲಾಗಿರುವ ಸೇತುವೆಯ ಮೇಲೆ ನಿಂತು ಪ್ರವಾಹದ ಕೆನ್ನೀರಿನಲ್ಲಿ ಸಾಗಿ ಬರುವ ಅಡಿಕೆ, ತೆಂಗಿನಕಾಯಿಗಳನ್ನು ಬಹಳ ನಾಜೂಕಿನಿಂದ ಮೇಲೆತ್ತುವ ಚಾಲಾಕಿ ಮಂದಿ ಸಂಜೆ ವೇಳೆಗೆ ಸಾಕಷ್ಟು ಕೃಷ್ಯುತ್ಪಗಳನ್ನು ಸಂಗ್ರಹಿಸುತ್ತಾರೆ. ಬಿದಿರಿನ ದೊಡ್ಡ ಕೋಲಿನ ಒಂದು ಬದಿಗೆ ಬಲೆಯನ್ನು ಗೋಲಾಕಾರದಲ್ಲಿ(ಬುಟ್ಟಿಯಂತೆ) ಕಟ್ಟಿ ಸೇತುವೆಯಿಂದ ಹರಿಯುವ ನೀರಿಗೆ ಬಾಗಿಸಿ ತೆಂಗಿನಕಾಯಿ ಅಥವಾ ಅಡಿಕೆಯನ್ನು ಹಿಡಿಯುತ್ತಾರೆ. ಇದೇ ಸಾಕಷ್ಟು ಪ್ರಮಾಣದಲ್ಲಿ ಕೃಷ್ಯುತ್ಪನ್ನಗಳನ್ನು ಸಂಗ್ರಹಿಸುತ್ತಾರೆ.
300ಕ್ಕೂ ಅಧಿಕ ತೆಂಗಿನಕಾಯಿ
ಜಡಿ ಮಳೆಗೆ ಸೇತುವೆಯ ಮೇಲೆ ನಿಂತು ಒಂದು ರೀತಿಯ ಸಾಹಸದೊಂದಿಗೆ ಕೃಷಿ ವಸ್ತುಗಳನ್ನು ಹಿಡಿಯುವ ಇವರು ಭಾರೀ ಪ್ರವಾಹದ ನೀರು ಹರಿಯುವ ಸಮಯದಲ್ಲಿ ದಿನಕ್ಕೆ 300ಕ್ಕೂ ಮಿಕ್ಕಿದ ತೆಂಗಿನಕಾಯಿಗಳನ್ನು ಹಿಡಿಯುತ್ತಾರೆ. ಹೀಗೆ ಹಿಡಿಯುವ ತೆಂಗಿನಕಾಯಿಗಳಲ್ಲಿ ಕೆಲವನ್ನು ಮನೆ ಖರ್ಚಿಗೆ ಉಪಯೋಗಿಸಿ, ಉಳಿದ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಾರೆ. ಮಳೆಗಾಲ ತುಂಬಾ ಇದೇ ರೀತಿ ತೆಂಗಿನಕಾಯಿ ಹಿಡಿದು ಜೀವನವನ್ನು ಮಾಡುವ ಇವರು ಉಳಿದ ದಿನಗಳಲ್ಲಿ ಕೂಲಿ ಮಾಡಿ ಬದುಕುತ್ತಾರೆ. ಒಂದೆಡೆ ಪ್ರವಾಹದಿಂದ ಜೀವನವೇ ನಾಶವಾಗಿ ಬದುಕಿನ ನೆಲೆಯನ್ನು ಕಳೆದುಕೊಂಡರೆ ಇನ್ನೊಂದೆಡೆ ಪ್ರವಾಹವನ್ನೇ ಜೀವನದ ಆದಾಯದ ಮೂಲವನ್ನಾಗಿ ಮಾಡಿಕೊಳ್ಳುವವರು ಸೇತುವೆಯ ಮೇಲ್ಗಡೆ ಕಂಡು ಬರುತ್ತಾರೆ.
ಭಾರೀ ಮಳೆಯೇ ಆದಾಯ
ಮಳೆಗಾಲ ಆರಂಭವಾಯಿತೆಂದರೆ ನಮಗೆ ಆದಾಯದ ಮೂಲ ಶುರುವಾಯಿತೆಂದೇ ಅರ್ಥ. ನಾವು ಬೆಳಗ್ಗಿನಿಂದ ರಾತ್ರಿಯವರೆಗೂ ಪ್ರವಾಹದ ನೀರಿನಲ್ಲಿ ಕೃಷ್ಯುತ್ಪನ್ನಗಳನ್ನು ಹಿಡಿಯುವ ಕಾರ್ಯ ನಡೆಸುತ್ತೇವೆ. ಮಳೆ ಅತಿಯಾಗಿ ಬಂದರೆ ನಮಗೆ ಸಂತಸವೇ. ಯಾಕೆಂದರೆ ತೋಟಗಳಲ್ಲಿ ಬಿದ್ದಿರುವ ತೆಂಗು ಅಡಿಕೆಗಳು ನೀರಿನಲ್ಲಿ ತೇಲುತ್ತಾ ಬರುತ್ತದೆ. ಇಂತಹ ಸಂದರ್ಭಕ್ಕಾಗಿ ನಾವು ಕಾಯುತ್ತಿರುತ್ತೇವೆ ಎನ್ನುತ್ತಾರೆ ಕೊಡಂಗಾಯಿಯ ಮಹಮ್ಮದ್ ಸಮೀರ್.
ಕೃಷ್ಯುತ್ಪನ್ನ ವ್ಯರ್ಥವಾಗದು
ನಾವು ಪ್ರತೀ ವರ್ಷ ಮಳೆಗಾಲದ ಸಂದರ್ಭ ಅಡಿಕೆ, ತೆಂಗು ಹೆಕ್ಕುವ ಕೆಲಸ ಮಾಡುತ್ತೇವೆ. ಇದು ತ್ರಾಸದಾಯಕ ಕೆಲಸವೇ ಆದರೂ ಕೆಲವೊಮ್ಮೆ ಬಹಳಷ್ಟು ಲಾಭ ದೊರಕುತ್ತದೆ. ಕೆಲವು ಬಾರಿ ನೂರಾರು ತೆಂಗಿನಕಾಯಿಗಳು ಲಭಿಸುತ್ತದೆ. ಕೊಕ್ಕೆಗೆ ಬಲೆ ಕಟ್ಟಿ ಪ್ರವಾಹದಲ್ಲಿ ಸಾಗಿ ಬರುವ ಅಡಿಕೆ, ತೆಂಗು ಹಿಡಿಯುವುದು ಅಪಾಯಕಾರಿಯೂ ಹೌದು. ನಾವು ಈ ರೀತಿ ಹಿಡಿಯುವುದರಿಂದ ತೆಮಗಿನಕಾಯಿ, ಅಡಿಕೆ ಮತ್ತಿತರ ಉತ್ಪನ್ನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ ವ್ಯರ್ಥವಾಗುವುದನ್ನು ತಪ್ಪಿಸಿದಂತೆಯೂ ಆಗುತ್ತದೆ ಎನ್ನುತ್ತಾರೆ ಬಂಟ್ವಾಳ ಕುದ್ಕೋಳಿಯ ಯೋಗೀಶ ಕುದ್ಕೋಳಿ.