ಶ್ರೀರಾಮನಿಗೆ ಅನ್ಯಾಯ ಮಾಡಿದವರು ಉದ್ಧಾರ ಆಗುವುದಿಲ್ಲ: ಆರ್.ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಶ್ರೀರಾಮನಿಗೆ ಅನ್ಯಾಯ ಮಾಡಿದವರು ಉದ್ಧಾರ ಆಗುವುದಿಲ್ಲ. ಹಿಂದೂ ವಿರೋಧಿ ನಿಲುವಿನ ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ ಆಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ದೃಷ್ಟಿ ಬೊಟ್ಟಿಗಾಗಿ ಕಾಂಗ್ರೆಸ್ಸಿಗೆ ಒಂದು ಸ್ಥಾನ ಲಭಿಸಿತ್ತು. ಈ ಬಾರಿ ದೃಷ್ಟಿ ಬೊಟ್ಟೂ ಇರುವುದಿಲ್ಲ ಎಂದು ನುಡಿದರು. ಆ ರೀತಿಯ ತೀರ್ಮಾನವನ್ನು ಜನರು ಮಾಡಿದ್ದಾರೆ. ಇವರು ಇದೇರೀತಿ ಮುಸ್ಲಿಂ ಓಲೈಕೆ ಮಾಡುತ್ತಿದ್ದರೆ ಈ ಸರಕಾರಕ್ಕೆ ಕಂಟಕ ಕಾದಿದೆ ಎಂದು ತಿಳಿಸಿದರು.

ಹಿಂದೂ ಕಾರ್ಯಕರ್ತರ ಬಂಧನ ಒಂದೆಡೆ, ಇನ್ನೊಂದೆಡೆ ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಪ್ರಕಟಣೆ ಮಾಡುವ ಈ ಸರಕಾರವು ಮುಸ್ಲಿಂ ಕಾಲೊನಿಗಳಿಗೆ 1 ಸಾವಿರ ಕೋಟಿ ಹಣ ಬಿಡುಗಡೆಗೆ ಮುಂದಾಗಿದೆ. ಬರಗಾಲದಿಂದ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೊಡಲು ಇವರ ಯೋಗ್ಯತೆಗೆ ದುಡ್ಡಿಲ್ಲ ಎಂದು ಆಕ್ಷೇಪಿಸಿದರು.

ಸಂಸತ್ ಚುನಾವಣೆಯಲ್ಲಿ ಮುಸ್ಲಿಂ ಮತಕ್ಕಾಗಿ ಒಂದು ರೀತಿ ತುಷ್ಟೀಕರಣ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್, ಬ್ರಿಟಿಷರಂತೆ ಒಡೆದಾಳುವ ನೀತಿ ಮಾಡುತ್ತಿದೆ. ಇದಕ್ಕಾಗಿಯೇ ಎಲ್ಲ ಕಡೆ ಹಿಂದೂ ಕಾರ್ಯಕರ್ತರ ಕೇಸುಗಳನ್ನು ಓಪನ್ ಮಾಡುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ಸಿಗರ ತಟ್ಟೆಯಲ್ಲಿ ಸತ್ತ ಹೆಗ್ಗಣ ಬಿದ್ದಿದೆ. ಅದನ್ನು ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಹುಡುಕುತ್ತಿದ್ದಾರೆ. ಸ್ವತಃ ನಿಮ್ಮ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿಯವರ ಮೇಲೇ ಹತ್ತಾರು ಕೇಸಿದೆ. ಸೋನಿಯಾ ಗಾಂಧಿಯವರ ಮೇಲೂ ಕೇಸಿದೆ. ಬಡಪಾಯಿ ಆಟೋ ಚಾಲಕನ ಮೇಲೆ ಬೇಕೆಂದೇ ಕೇಸು ಹಾಕಿದ್ದಾರೆ. ಕೋರ್ಟ್ ಅವರನ್ನು ಅಪರಾಧಿ ಎಂದಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ಅಪರಾಧಿ ಮಾಡಲು ಹೊರಟಿದೆ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!