ಒಂದೇ ಸೂರಿನಡಿ ಸೇರಿದ ದೇಶ ಲೂಟಿ ಮಾಡಿದವರು: ವಿಪಕ್ಷ ಮೈತ್ರಿಗೆ ಶೋಭಾ ಕರಂದ್ಲಾಜೆ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನು ಅರವತ್ತು ವರ್ಷ ಲೂಟಿ ಮಾಡಿದವರು ಒಂದಾಗಿದ್ದಾರೆ. ಇವರಲ್ಲಿ ಪ್ರಧಾನಿ ಆಕಾಂಕ್ಷಿಗಳೇ ತುಂಬಿದ್ದಾರೆ. ತಮ್ಮ ಒಕ್ಕೂಟಕ್ಕೆ ಬ್ರಿಟಿಷ್ ಲೂಟಿಕೋರರು ಬಳಸಿದ ಇಂಡಿಯಾ ಎಂಬ ಹೆಸರು ಇಟ್ಟುಕೊಂಡು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಅವರು ಬುಧವಾರ ಉಡುಪಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯ ಹೆಸರಲ್ಲಿ ಭಾರತವನ್ನು ಲೂಟಿಗೈದರು. ಈಗ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರುವಾಗಿದೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿಯಾಗಿದೆ. ಭಾರತದ ಸಾರ್ವಭೌಮತೆಯನ್ನು ಇಡೀ ಪ್ರಪಂಚಕ್ಕೆ ಪಸರಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಒಟ್ಟಾಗಿ, ಸಂವಿಧಾನ ವಿರೋಧಿ ಹೆಸರು ಇಟ್ಟುಕೊಂಡಿದ್ದಾರೆ ಎಂದರು.

ಆರ್ಟಿಕಲ್ 1 ಪ್ರಕಾರ ಈ ರೀತಿಯ ಯಾವುದೇ ಹೆಸರು ಅಥವಾ ಲಾಂಛನ ಇಡುವಂತಿಲ್ಲ. ದ ಆಂಬ್ಲಂಮ್ಸ್ ಅಂಡ್ ನೇಮ್ಸ್ ಪ್ರಿವೆಂಷನ್ ಆಫ್ ಇಂಪ್ರಾಪರ್ ಯೂಸ್ ಆಕ್ಟ್ ಪ್ರಕಾರ ಇದು ತಪ್ಪು. ಇಂಡಿಯಾ ಎನ್ನುವ ಹೆಸರನ್ನು ಯಾವುದೇ ಪಾರ್ಟಿ ಸಂಘಟನೆ ಸಂಸ್ಥೆಗೆ ಇಡುವಂತಿಲ್ಲ, 60 ವರ್ಷ ದೇಶ ಆಳಿದವರು ಬೇರೆ ಯಾವುದೇ ಹೆಸರಿಟ್ಟರೆ ಜನ ಬೆಲೆ ಕೊಡುವುದಿಲ್ಲ, ಈ ಕಾರಣಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದಾರೆ. ಇದು ಎನ್ ಡಿ ಎ ವರ್ಸಸ್ ಇಂಡಿಯಾ ಅಲ್ಲ, ಇದು ಭಾರತ ವರ್ಸಸ್ ಇಂಡಿಯಾ ಎಂದವರು ನುಡಿದರು.

ಭಾರತದಲ್ಲಿ ಈಗ ಹೊಸ ಕಂಪನಿ ಆರಂಭವಾಗಿದ್ದು, ಈಸ್ಟ್ ಇಂಡಿಯಾ ಕಂಪನಿಯನ್ನು ದೇಶವಾಸಿಗಳು ಓಡಿಸಿದ್ದರು. 2024ರಲ್ಲಿ ಮತ್ತೊಮ್ಮೆ ದೇಶದ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ.ಈ ಈಸ್ಟ್ ಇಂಡಿಯಾ ಕಂಪೆನಿಗೆ ನರೇಂದ್ರ ಮೋದಿಯೇ ಟಾರ್ಗೆಟ್ ಆಗಿದ್ದಾರೆ. ಆದರೆ ಭಾರತದ ಜನ ನರೇಂದ್ರ ಮೋದಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಜಿತ್ ಪವರ್ ಎನ್ ಡಿಎ ಸೇರ್ಪಡೆ:

ಅಜಿತ್ ಪವಾರ್ ಕುಟುಂಬ ರಾಜಕಾರಣದಿಂದ ಬೇಸತ್ತು ಎನ್.ಡಿ.ಎ ಸೇರಿದ್ದಾರೆ. ಅಜಿತ್ ಪವಾರ್ ಅವರೇ ಎನ್.ಸಿ.ಪಿ ನಾಯಕ ಎಂದು ಎಲ್ಲರೂ ಹೇಳುತ್ತಿದ್ದರು, ಆದರೆ ಎನ್.ಸಿ.ಪಿ ಅಧ್ಯಕ್ಷನ ಚುನಾವಣೆಯಲ್ಲಿ ಅಜಿತ್ ಪವಾರ್ ರನ್ನು ಗಣನೆಗೆ ತೆಗೆದುಕೊಂಡಿಲ್ಲ, ಕುಟುಂಬ ರಾಜಕಾರಣದಿಂದ ಬೇಸತ್ತು ಅವರು ಆಚೆ ಬಂದಿರಬಹುದು. ಅಜಿತ್ ಪವಾರ್ ಜೊತೆ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ. ದೇಶವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಅವರು ಜೋಡಣೆಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಜಾರಿ:

ಮುಂದಿನ ಮೂರು, ನಾಲ್ಕು ತಿಂಗಳಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಕೆಎಸ್ಆರ್ಟಿಸಿ ಗೆ ಬಜೆಟ್ ನಲ್ಲಿ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ, 200 ಯೂನಿಟ್ ಉಚಿತ ವಿದ್ಯುತ್ ಇವತ್ತಿನ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಭಾಗ್ಯಲಕ್ಷ್ಮಿ ಮತ್ತು ನಿರುದ್ಯೋಗಿ ಭತ್ತೆ, ಮುಂದೂಡುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ನಡೆಯುತ್ತಿರಬಹುದು ಆದರೆ ಬಜೆಟ್ ನಲ್ಲಿ ಎಷ್ಟು ಅನುದಾನ ಇಟ್ಟಿದ್ದೀರಿ,‌ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲವನ್ನು ಘೋಷಿಸುತ್ತೇನೆ ಎಂದು ಹೇಳಿದ್ದೀರಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಕೇಳುತ್ತೇನೆ ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? 5 ಕೊಡುಗೆಗಳು ಯಾವಾಗ ಜನರಿಗೆ ನೀಡುತ್ತೀರಿ. ಭರವಸೆಗಳನ್ನು ಕೊಟ್ಟು ಓಟು ತೆಗೆದುಕೊಂಡಿದ್ದೀರಿ,ರಾಜ್ಯದಲ್ಲಿ ಎಲ್ಲಾ ಗ್ಯಾರೆಂಟಿ ವಿಚಾರದಲ್ಲಿ ಗೊಂದಲ ಕಾಡುತ್ತಿದೆ. ಕೇಂದ್ರ ಸರ್ಕಾರ ಕರೆದಿರುವ ಟೆಂಡರ್ ನಲ್ಲಿ ಬಿಡ್ ಮಾಡುತ್ತಿಲ್ಲ, ಮೋದಿಯನ್ನು ದೂರುವ ಚಾಳಿ ಮಾತ್ರ ಮುಂದುವರೆಸಿದ್ದೀರಿ, ಗ್ಯಾರೆಂಟಿ ಜಾರಿಯಾದ ನಂತರ ಸಂಬಂಧಪಟ್ಟ ಇಲಾಖೆಯ ನಷ್ಟ ಹೇಗೆ ತುಂಬುತ್ತೀರಿ ಹೇಳಿ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!