ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಕ್ತಿಯಿಂದ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರಿಗೆ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತವು ಬದುಕಿಗೆ ವಿರಾಮ ಕೊಟ್ಟಿದೆ. ಗೊಂಡಾ ಜಿಲ್ಲೆಯ ಇಟಿಯಾಥೋಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ಕಾರು ಕಾಲುವೆಗೆ ಉರುಳಿದ ಪರಿಣಾಮ 11 ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಿಂದ ಇಡೀ ಗೊಂಡಾ ಜಿಲ್ಲೆಯಲ್ಲಿ ಶೋಕದ ವಾತಾವರಣ ಮನೆಮಾಡಿದೆ.
ಅಪಘಾತಕ್ಕೆ ಒಳಪಟ್ಟ ಬೊಲೆರೊ ವಾಹನವು ಸಿಹಗಾಂವ್‌ನಿಂದ ಪ್ರಸಿದ್ಧ ಪೃಥ್ವಿನಾಥ ದೇವಾಲಯದ ಕಡೆಗೆ ಹೋಗುತಿತ್ತು. ವಾಹನದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿ 15 ಜನರಿದ್ದರು. ಪಾರಾಸರಾಯ್-ಅಲಾವಲ್ ದೇವರಿಯಾ ಮಾರ್ಗದ ರೆಹ್ರಾ ಗ್ರಾಮದ ಬಳಿ ಇರುವ ಸರಯು ಕಾಲುವೆಯ ಸೇತುವೆಯಲ್ಲಿ ತಿರುವು ತಪ್ಪಿದ ಕಾರು ನೇರವಾಗಿ ಕಾಲುವೆಗೆ ಬಿದ್ದಿದ್ದು, 11 ಮಂದಿ ಜೀವ ಕಳೆದುಕೊಂಡಿದ್ದಾರೆ.
ಘಟನೆಯ ತಕ್ಷಣ ಗ್ರಾಮಸ್ಥರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಶವಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಪಘಾತದ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ತಕ್ಷಣದ ವೈದ್ಯಸಹಾಯಕ್ಕೆ ಹಾಗೂ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ತನಿಖೆ ಆರಂಭವಾಗಿದೆ.