ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಆರ್‌ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.
ಈ ಹಿಂದೆ ಕೃಷಿ ತಾಪಂಡ ರವಿಂದ್ ರೆಡ್ಡಿ ವಿರುದ್ಧ ದೂರು ನೀಡಿದ್ದರು. ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದಿದ್ದರು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಆ ಬಳಿಕ ಆ ಉದ್ಯಮಿ, ತಾವು ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾಗಿ, ನಟಿ ತಮ್ಮನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದೆಲ್ಲ ಪ್ರತ್ಯಾರೋಪಗಳನ್ನು ಮಾಡಿದ್ದರು.
ಇದೀಗ ಉದ್ಯಮಿ ಅರವಿಂದ್ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು. ಈ ಬಗ್ಗೆ ಅರವಿಂದ ರೆಡ್ಡಿ ಸಂಜಯ್ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಖ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಆಪ್ತ ಎನ್ನಲಾಗಿದೆ.
ವೈಶಾಖ್, ಕೃಷಿ ತಾಪಂಡ ಮನೆಯನ್ನೇ ಬಂಧನಕ್ಕೆ ಒಳಗಾಗಿದ್ದಾನೆ ಎಂದ ಸುದ್ದಿಯೂ ಹರಿದಾಡುತ್ತಿದೆ. ವೈಶಾಖ್ ತನ್ನ ಮೊಬೈಲ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎಂಬುದು ಪೊಲೀಸರ ಗುಮಾನಿ ಆಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಟಿ ಕೃಷಿ ತಾಪಂಡಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದ್ದಾರೆ.



