ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಸಂದೇಶ ಕಳುಹಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಜೆಮ್‌ಶೆಡ್‌ಪುರದ ತರಕಾರಿ ಮಾರಾಟಗಾರನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಶೇಖ್ ಹುಸೇನ್ ಶೇಖ್ ಮೌಸಿನ್ (24) ಎಂದು ಗುರುತಿಸಲಾಗಿದೆ. ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಸಂದೇಶ ಬಂದಿತ್ತು. ಬೆದರಿಕೆಯ ಕುರಿತು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ವಾಟ್ಸಪ್ ಸಂದೇಶ ಬಂದಿತ್ತು.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಲ್ಮಾನ್ ಖಾನ್ ಅವರೊಂದಿಗಿನ ಎಲ್ಲಾ ದ್ವೇಷಗಳನ್ನು ಕೊನೆಗೊಳಿಸಲು ಈ 5 ಕೋಟಿ ರೂ.ಯ ಬೇಡಿಕೆಯನ್ನು ಇಟ್ಟಿತ್ತು. ಈ ಸಂದೇಶಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಜೆಮ್‌ಶೆಡ್‌ಪುರ್‌ನ ತರಕಾರಿ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.
ಮಂಗಳವಾರ ಬೆದರಿಕೆ ಬಂದಿದ್ದ ಸಂಖ್ಯೆಯಂದಲೇ ಪುನಃ ಸಂದೇಶ ಬಂದಿದ್ದು, ಅದರಲ್ಲಿ ಬೆದರಿಕೆ ಸಂದೇಶವನ್ನು ತಪ್ಪಾಗಿ ಕಳುಹಿಸಲಾಗಿದೆ. ಬಳಿಕ ಕ್ಷಮೆಯಾಚಿಸಿದ ಸಂದೇಶವನ್ನು ಕಳುಹಿಸಿದ್ದಾರೆ. ಪೊಲೀಸರು ಮೊಬೈಲ್ ನಂಬರ್‌ನ್ನು ಟ್ರ್ಯಾಕ್ ಮಾಡಿದಾಗ ಜಾರ್ಖಂಡ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.