ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರ ಮಗ ಬಿ.ಎಸ್ ಬಸವೇಶ್ವರ ಮೇಲೆ ಗಂಭೀರ ಕರ್ತವ್ಯ ನಿರತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಳೆದ 2 ದಿನದ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಜ್ಯೋತಿ ಅವರು ಕರ್ತವ್ಯದಲ್ಲಿದ್ದಾಗ ಶಾಸಕರ ಪುತ್ರ ಬಿ.ಎಸ್ ಬಸವೇಶ್ವರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಬಿ.ಎಸ್ ಬಸವೇಶ್ವರ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರೆಕಾರ್ಡ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿ ಜ್ಯೋತಿ ಅವರು ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಜ್ಯೋತಿ ಅವರು ಮೊನ್ನೆಯ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದೇನೆ. ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ನೀಡಿದ್ದು, ಅಂದಿನ ಘಟನೆ ಬಗ್ಗೆ ವಿವರಿಸಿದ್ದೇನೆ. ಮುಂದೆ ತನಿಖೆ ಆಗಲಿದೆ, ಹಾಗಾಗಿ ಹೆಚ್ಚಿಗೆ ಏನು ಹೇಳುವುದಿಲ್ಲ ಎಂದಿದ್ದಾರೆ.
ಭದ್ರಾವತಿಯ ಸೀಗೆಬಾಗಿ ಬಳಿ ಭೂ ವಿಜ್ಞಾನಿ ಅಧಿಕಾರಿ ಜ್ಯೋತಿ ಅವರು ಕರ್ತವ್ಯದಲ್ಲಿದ್ದಾಗ ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಬಸವೇಶ್ವರ ಅವರ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಆಗ ಫೋನಿನಲ್ಲಿ ಮಾತನಾಡಿದ ವ್ಯಕ್ತಿ ಸರ್ಕಾರಿ ಅಧಿಕಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಹಾಗೂ ಅವರ ಪುತ್ರ ಬಸವೇಶ್ವರಗೆ ಸಂಕಷ್ಟ ಎದುರಾಗಿದೆ.