ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಕರೆ: ಆರೋಪಿ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆಯಲ್ಲಿ ನಾಳೆ ರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ.ಇದರ ನಡುವೆ ತಾನು ಚೋಟಾ ಶಕೀಲ್ ಗ್ಯಾಂಗ್ ಸದಸ್ಯ ಎಂದು ಬಿಹಾರ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ, ಜನವರಿ 22ರಂದು ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ತಕ್ಷಣವೇ ಅಲರ್ಟ್ ಆದ ಪೊಲೀಸರು ಆರೋಪಿ ಇಂತೇಖಾಬ್ ಅಲಂನನ್ನು ಬಂಧಿಸಿದ್ದಾರೆ.

21 ವರ್ಷದ ಇಂತೇಖಾಬ್ ಅಲಂ ಬಲುವಾ ಕಲಿಯಾಗಂಜ್ ಮೂಲದವನಾಗಿದ್ದು, ಜನವರಿ 19 ರಂದು ಬಿಹಾರ ಪೊಲೀಸರಿಗೆ ಕರೆ ಮಾಡಿದ್ದಾನೆ. 112ಕ್ಕೆ ಕರೆ ಮಾಡಿ ತಾನು ಚೋಟಾ ಶಕೀಲ್ ಗ್ಯಾಂಗ್ ವ್ಯಕ್ತಿ. ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಅಂದರೆ ಜನವರಿ 22ರಂದು ಆಯೋಧ್ಯೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರಿಗೆ ತಡೆಯಲು ಸಾಧ್ಯವಾದರೆ ತಡೆಯಿರಿ ಎಂದು ಸವಾಲು ಹಾಕಿದ್ದಾನೆ.

ಕರೆ ಬಂದ ನಂಬರ್ ಟ್ರೇಸ್ ಮಾಡಿದ ಪೊಲೀಸರು ಮೂರೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತಂದೆಯ ಹೆಸರಿನಲ್ಲಿರುವ ಸಿಮ್ ಮೂಲಕ ಆರೋಪಿ ಇಂತೇಖಾಬ್ ಅಲಂ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಸೂಕ್ಷ್ಮ ವಿಚಾರವಾಗಿರುವ ಕಾರಣ ಪ್ರಕರಣ ದಾಖಲಿಸಲಾಗಿದೆ. ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇತ್ತ ಈತನ ವಿರುದ್ಧ ಇತರ ಯಾವುದೇ ಪ್ರಕರಣಗಳಿಲ್ಲ. ಆದರೆ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!