ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾದ ಕಾರಣ ಕುವೈತ್‌ನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅಹಮದಾಬಾದ್‌ಗೆ ತಿರುಗಿಸಿದ ಘಟನೆ ಶುಕ್ರವಾರ ನಡೆದಿದೆ.
ವಿಮಾನದೊಳಗೆ ಸಿಬ್ಬಂದಿಗೆ ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬರಹ ಕಂಡುಬಂದಿದ್ದು, ಕೂಡಲೇ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ವಿಮಾನವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದ್ದು, ಬೆಳಿಗ್ಗೆ ಸುಮಾರು 6.40ರ ವೇಳೆಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ ಸುಮಾರು 180 ಮಂದಿ ಇದ್ದರು.
ಇದನ್ನೂ ಓದಿ:
ಲ್ಯಾಂಡಿಂಗ್ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದ್ದು, ಯಾವುದೇ ಗೊಂದಲವಿಲ್ಲದೆ ಲಗೇಜ್ ತಪಾಸಣೆ ನಡೆಸಲಾಯಿತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ವಿಮಾನದಲ್ಲಿ ಸಂಪೂರ್ಣ ಶೋಧ ಕಾರ್ಯ ಕೈಗೊಂಡಿವೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



