ಹೊಸದಿಗಂತ ವರದಿ ಹಾಸನ :
23 ಕೆಜಿ ತೂಕದಷ್ಟು ಹಸಿ ಮತ್ತು ಒಣ ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಪೆದ್ದನಹಳ್ಳಿ ಮೈಸೂರು-ಹಾಸನ ರಸ್ತೆ ಬದಿಯ ಹಳೇ ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಲು ಮುಂದಾಗಿದ್ದಾರೆ.
ಗ್ರಾಮಾಂತರ ಪಿಎಸ್‌ಐ ರಮೇಶ್‌ಕುಮಾರ್.ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಪೊಲೀಸರು ಬರುತ್ತಿದ್ದಂತೆಯೇ ಸ್ಥಳದಿಂದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಕೂಡಲೇ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ.
ಕೆ.ಆರ್.ನಗರ ತಾಲ್ಲೂಕಿನ, ಗಾಂಧಿನಗರದ ಷಫೀವುಲ್ಲಾಖಾನ್ (38), ತುಮಕೂರು ಜಿಲ್ಲೆ, ಗುಬ್ಬಿ ಪಟ್ಟಣದ ಕೈಸರ್‌ಖಾನ್ (45), ಬೆಂಗಳೂರು ಅಕ್ಷಯ ನಗರದ ರೇಷ್ಮಾ.ಹೆಚ್.ಎಸ್. (30) ಬಂಧಿತ ಆರೋಪಿಗಳು.
ಪೊಲೀಸರು ಬಂಧಿತರಿಂದ ಸುಮಾರು 11 ಲಕ್ಷ ರೂ ಮೌಲ್ಯದ ಬೆಲೆ ಬಾಳುವ 23 ಕೆಜಿ ತೂಕದಷ್ಟು ಹಸಿ ಮತ್ತು ಒಣ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.