ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಹತ್ಯೆಗೈದು ಅಪಘಾತ ಎಂದು ಬಿಂಬಿಸಿದ್ದ ಪತಿ ಹಾಗೂ ಆತನ ಇಬ್ಬರು ಸಹಜರರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಚೈತಾಲಿ ಪ್ರದೀಪ್ ಕಿರಣಗಿ (23) ಹತ್ಯೆಯಾದ ಗರ್ಭಿಣಿ ಮಹಿಳೆ. ಆರೋಪಿಗಳನ್ನು ಮಹಿಳೆಯ ಪತಿ ಪ್ರದೀಪ್ ಅನ್ನಾಸಾಬ್ ಕಿರಣಗಿ ಈತನ ಸಹಚರರಾದ ಸದ್ದಾಂ ಅಕ್ಬರ್ ಇಮಂದರ್ ಮತ್ತು ರಾಜನ್ ಗಣಪತಿ ಕಾಂಬ್ಳೆ ಎಂದು ಗುರ್ತಿಸಲಾಗಿದೆ. ಚಿಕ್ಕೋಡಿಯ ಉಗಾರ್ ಬಿಕೆ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ಘಟನೆ ನಡೆದಿದೆ.
ಪ್ರಕರಣ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಲೇದ್ ಅವರು ಮಾಹಿತಿ ನೀಡಿದ್ದು, ರಾತ್ರಿ ನಮ್ಮ ಕಾಗವಾಡ್ ಪಿಎಸ್ಐಗೆ ಒಂದು ಕರೆ ಬಂದಿತ್ತು. ನನ್ನ ಪತ್ನಿಗೆ ಅಪಘಾತವಾಗಿದೆ, ನೀವು ಸಹಾಯ ಮಾಡಿ. ನಾನು ಹೆಚ್ಚಿನ ಚಿಕಿತ್ಸೆಗಾಗಿ ಕಾಗವಾಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ’ ಎಂದು ಕೊಲೆಯಾದ ಮಹಿಳೆಯ ಪತಿ ಪ್ರದೀಪ್ ತಿಳಿಸಿದ್ದ.
ತಕ್ಷಣ ನಮ್ಮ ಓರ್ವ ಸಿಬ್ಬಂದಿ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಕಾಗವಾಡ ಆಸ್ಪತ್ರೆಯಲ್ಲಿ ಅವರು ಇರಲಿಲ್ಲ. ಹಾಗಾಗಿ ಪೊಲೀಸರು ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ, ನಾನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಬಂದಿದ್ದೇನೆ. ಪತ್ನಿ ಮರಣ ಹೊಂದಿದ್ದಾಳೆ. ನಮಗೆ ಕಾನೂನು ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಮಾಡಿಕೊಡಿ. ನಾವು ಮುಂದಿನ ಕಾರ್ಯ ಮಾಡುತ್ತೇವೆ ಎಂದು ಪದೇ ಪದೇ ನಮಗೆ ಕರೆ ಮಾಡುತ್ತಿದ್ದ.
ಅಷ್ಟರೊಳಗೆ ಆತ ಹೇಳಿದ ಅಪಘಾತವಾದ ಸ್ಥಳ ಮತ್ತು ಅವನ ವಾಹನ ಪರಿಶೀಲನೆ ಮಾಡಲಾಗಿತ್ತು. ಆದರೆ, ಆ ರೀತಿ ಏನೂ ಕಂಡುಬರಲಿಲ್ಲ. ಈ ಆಧಾರದ ಮೇಲೆ ನಮ್ಮ ಪೊಲೀಸರಿಗೆ ಸಂಶಯ ಶುರುವಾಗಿತ್ತು. ಅಷ್ಟರಲ್ಲಿ ಮಹಾರಾಷ್ಟ್ರ ಮೀರಜ್ ಪೊಲೀಸರು ಕಾಗವಾಡ ಪೊಲೀಸರಿಗೆ ಈ ರೀತಿ ಪ್ರಕರಣ ಬಂದಿದೆ ಮೇಲ್ನೋಟಕ್ಕೆ ಇದು ಕೊಲೆಯಂತೆ ಕಾಣಿಸುತ್ತಿದೆ ಎಂದು ತಿಳಿಸುತ್ತಿದ್ದಂತೆ, ನಮ್ಮ ಪೊಲೀಸರು ಆರೋಪಿಗಳನ್ನು ಮತ್ತಷ್ಟು ವಿಚಾರಣೆ ಮಾಡಿದಾಗ ತಾವು ಮಾಡಿರುವ ತಪ್ಪನ್ನು ಬಾಯಿಬಿಟ್ಟಿದ್ದಾರೆಂದು ಹೇಳಿದ್ದಾರೆ.
ಪ್ರದೀಪ್ ಈ ಹಿಂದೆ ಎರಡು ಬಾರಿ ತನ್ನ ಪತ್ನಿಯನ್ನು ಕೊಲ್ಲಲು ಪ್ರಯತ್ನಿಸಿದ್ದು, ಆದರೆ, ಆಕೆ ಬದುಕುಳಿದಿದ್ದಾಳೆ. ಎರಡು ವರ್ಷಗಳ ಹಿಂದೆ ಚೈತಾಲಿಯನ್ನು ವಿವಾಹವಾದ ಪ್ರದೀಪ್ ವಿವಾಹೇತರ ಸಂಬಂಧ ಹೊಂದಿದ್ದನು. ಈ ಸಂಬಂಧ ಬಯಲಾಗುತ್ತದೆ ಎಂಬ ಭಯದಿಂದ ಪತ್ನಿಯನ್ನು ಕೊಲ್ಲಲು ನಿರ್ಧರಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.