ಹೊಸದಿಗಂತ ವರದಿ,ವಿಜಯಪುರ:
ನಗರದಲ್ಲಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದ 3 ಜನ ಆರೋಪಿಗಳನ್ನು ಬಂಧಿಸಿ, 5 ಕಂಟ್ರಿ ಪಿಸ್ತೂಲ್, 6 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಇಂಡಿ ತಾಲೂಕಿನ ಮೂಲ ನಿವಾಸಿ, ಪ್ರಸ್ತುತ ಹಾಲಿ ವಸ್ತಿ ಹವೇಲಿ ಗಲ್ಲಿಯ ನಯೀಮ್ ಸಿರಾಜ್ ಶಾಮಣ್ಣವರ (30), ಭವಾನಿ ನಗರದ ನಿಹಾಲ್ ಉರ್ಫ್ ನೇಹಾಲ್ ಮಹಿಬೂಬಸಾಬ ತಾಂಬೋಳಿ (25), ಯೋಗಾಪುರ ಕಾಲೋನಿಯ ಸಿದ್ದು ಉರ್ಫ್ ಸಿದ್ಯಾ ಗುರುಪಾದ ಮೂಡಲಗಿ ಉರ್ಫ್ ಮೂಡಂಗಿ (29) ಬಂಧಿತ ಆರೋಪಿಗಳು ಎಂದರು.
ಆರೋಪಿ ನಯೀಮ್ ಸಿರಾಜ್ ಈತ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದಾನೆ ಎನ್ನುವ ಖಚಿತ ಮಾಹಿತಿ ಆಧರಿಸಿ, ಎಪಿಎಂಸಿ ಠಾಣಾ ವ್ಯಾಪ್ತಿಯ ಇಂಡಿ ರಸ್ತೆಯ ಕೆಐಎಡಿಬಿ ಹತ್ತಿರ ಈತನನ್ನು ಬಂಧಿಸಿ, 1 ಕಂಟ್ರಿ ಪಿಸ್ತೂಲ್, 1 ಜೀವಂತ ಗುಂಡು ಜಪ್ತಿ ಮಾಡಿ, ವಿಚಾರಣೆಗೆ ಒಳಪಡಿಸಿದಾಗ, ಇನ್ನೂ ಇಬ್ಬರಿಗೆ ಕಂಟ್ರಿ ಪಿಸ್ತೂಲ್ ಪೂರೈಸಿರುವ ಮಾಹಿತಿ ಆಧರಿಸಿ, ನಿಹಾಲ್ ಉರ್ಫ್ ನೇಹಾಲ್ ವಶಕ್ಕೆ ಪಡೆದು, 3 ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡು ಹಾಗೂ ಸಿದ್ದು ಉರ್ಫ್ ಸಿದ್ಯಾ ಮೂಡಲಗಿ ವಶಕ್ಕೆ ಪಡೆದು, 1 ಪಿಸ್ತೂಲ್, 1 ಜೀವಂತ ಗುಂಡು ಸೇರಿ ಆರೋಪಿಗಳಿಂದ ಒಟ್ಟು 5 ಕಂಟ್ರಿ ಪಿಸ್ತೂಲ್, 6 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್ ಐ ಜ್ಯೋತಿ ಖೋತ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ ಎಂದರು.