ಸರ್ವೆ ಮಾಡದೇ ಮನೆ ಮುಂದೆ ಸ್ಟಿಕ್ಕರ್‌ ಅಂಟಿಸಿದ್ದನ್ನು ಕೇಳಿದ್ದಕ್ಕೆ ಹಲ್ಲೆ: ಮೂವರು BBMP ನೌಕರರು ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಮೀಕ್ಷೆಯನ್ನೇ ಮಾಡದೇ ಜಾತಿಗಣತಿ ಪೂರ್ಣ ಎಂಬ ಸ್ಟಿಕ್ಕರ್ ಅಂಟಿಸಿದ್ದನ್ನು ಮನೆ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. 2025ರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಮೂರು ಜನ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್.ಬಿ.ಆರ್ ಲೇಔಟ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕರಾದ ರಮೇಶ್, ಕಂದಾಯ ವಸೂಲಿಗಾರರಾದ ಪೆದ್ದುರಾಜು ಹಾಗೂ ಕೆಂಗೇರಿ ಉಪವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ವಸೂಲಿಗಾರರಾದ ಸಿ.ಸಂದಿಲ್ ಕುಮಾರ್‌ರವರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿರುವ ನಂದೀಶ್ ಎಂಬುವವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಜಾತಿಗಣತಿ ಪೂರ್ಣಗೊಂಡಿದೆ ಎಂಬ ಸ್ಟಿಕ್ಕರ್ ಅಂಟಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನೆ ಮಾಲೀಕ ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!