ಹೊಸದಿಗಂತ ಚಿಕ್ಕಮಗಳೂರು:
ಕಾಫಿನಾಡು ಚಿಕ್ಕಮಗಳೂರು ತ್ರಿಬಲ್ ಮರ್ಡರ್ ಗೆ ಬೆಚ್ಚಿ ಬಿದ್ದಿದೆ. ತನ್ನ ಮಗು, ಅತ್ತೆ ಹಾಗೂ ನಾದಿನಿಯನ್ನು ಗುಂಡಿಟ್ಟು ಕೊಂದಿರುವ ವ್ಯಕ್ತಿ ತಾನೂ ಸಹ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪದ ಮಾಗಲು ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಬಾಳೆಹೊನ್ನೂರಿನ ಖಾಸಗಿ ಶಾಲೆಯಲ್ಲಿ ಚಾಲಕನಾಗಿದ್ದ ರತ್ನಾಕರ ಗೌಡ ಎಂಬಾತನೆ ಮೂವರನ್ನು ಭೀಕರವಾಗಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ರತ್ನಾಕರನ ಪತ್ನಿ ಕಳೆದ ಎರಡುವರ್ಷಗಳ ಹಿಂದೆಯೇ ಪತಿ ಹಾಗೂ ಮಗಳನ್ನು ಬಿಟ್ಟು ಹೋಗಿದ್ದಳು. ಇದರಿಂದ ಸಹಪಾಠಿಗಳು ಶಾಲೆಯಲ್ಲಿ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ ಎಂದು ಮಗಳು ತಂದೆ ರತ್ನಾಕರ್ ಬಳಿ ಅಳಲು ತೋಡಿ ಕೊಂಡಿದ್ದಳು. ಇದರಿಂದ ಮನ ನೊಂದಿದ್ದ ರತ್ನಾಕರ್ ನಿನ್ನೆ ರಾತ್ರಿ 10 ಗಂಟೆಯ ವೇಳೆಗೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮಕ್ಕೆ ತೆರಳಿ ತನ್ನ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26), ಹಾಗೂ ತನ್ನ 7 ವರ್ಷದ ಮಗುವನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಬಳಿಕ ಸೆಲ್ಫಿ ವಿಡಿಯೋ ಮಾಡಿ ಸಂಸಾರದ ನೋವನ್ನು ತೋಡಿ ಕೊಂಡಿದ್ದಾನೆ. ನನ್ನ ಹೆಂಡತಿ ಮೋಸ ಮಾಡಿ ಹೋಗಿ ಎರಡು ವರ್ಷ ಆಯ್ತು ಆಮೇಲೆ ಮಗಳನ್ನು ಬೇಡ ಅಂತಾ ಬಿಟ್ಟಳು. ಈಗ ಶಾಲೆಯಲ್ಲಿ ನನ್ನ ಮಗಳಿಗೆ ಆಕೆಯ ಫ್ರೆಂಡ್ಸ್ ನಿನ್ನ ಅಮ್ಮ ಎಲ್ಲಿ ಅಂತ ಕೇಳ್ತಾರೆ ಮಗಳು ಅಮ್ಮನ ಫೋಟೋ ತಕೊಂಡು ಹೋಗಿ ಈಕೆ ನನ್ನ ಅಮ್ಮ ಅಂತ ತೋರಿಸಿದ್ದಾಳೆ ಎಂದು ವಿಡಿಯೋದಲ್ಲಿ ರತ್ನಾಕರ್ ಹೇಳಿಕೊಂಡಿದ್ದಾನೆ.
ಮೂವರನ್ನು ಹತ್ಯೆ ಮಾಡಿದ ಬಳಿಕ ರತ್ನಾಕರ್ ಮನೆಯಿಂದ ಸ್ವಲ್ಪ ದೂರದಲ್ಲಿ ತಾನು ಅದೇ ಬಂದೂಕಿ ನಿಂದ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾನೆ. ಘಟನೆಯಲ್ಲಿ ಮೃತ ಸಿಂಧು ಅವರ ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಮ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ