September 28, 2026
Monday, September 28, 2026
spot_img

ಮೂರು ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆ: SBI ಸೇವೆಗಳು ಎಂದಿನಂತೆ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮೂರು ದಿನಗಳ ಕಾಲ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೇಳಿದೆ.

ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ. ಹೀಗಾಗಿ ಬ್ಯಾಂಕ್‌ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಲ್ಲಾ ಶಾಖೆಗಳು ಮತ್ತು ಎಲ್ಲಾ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಎಸ್‌ಬಿಐ ಬ್ಯಾಂಕ್‌ಗಳು ಓಪನ್ ಇರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾನುವಾರ (ಸೆ.27) ರಾತ್ರಿ ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ನಡುವೆ ನಡೆದ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ.

ಸಭೆಯಲ್ಲಿ ತಿಂಗಳ ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ತಕ್ಷಣವೇ ರಚಿಸಲಾಗುವುದು. ಈ ಸಮಿತಿಯು ಎಲ್ಲಾ ಮಾರ್ಗಗಳ ಬಗ್ಗೆ ಪರಿಶೀಲಿಸಿ, ನಂತರ ಈ ಬಗ್ಗೆ ಚರ್ಚಿಸಿ, ಮುಖ್ಯವಾಗಿ ಗ್ರಾಹಕರಿಗೆ ಒಪ್ಪಿಗೆಯಾಗುವಂತೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.

ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳ PLI ಯೋಜನೆ ಬದಲಾವಣೆ ಕುರಿತು IBA ಜೊತೆ ಮಾತುಕತೆ ಆರಂಭವಾಗಲಿದ್ದು, ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಜೊತೆಗೆ 2024ರ ಮಾರ್ಚ್ 8 ಸಭೆಯಲ್ಲಿ ತಿಳಿಸಿರುವಂತೆ ಇತ್ತೀಚಿನ ಬಾಕಿ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸದ್ಯ ಈ ಎಲ್ಲಾ ಒಪ್ಪಂದಗಳ ಕಾರಣದಿಂದಾಗಿ, UFBU ಕರೆ ನೀಡಿದ್ದ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಹಿಂಪಡೆದಿದೆ.

Must Read