ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಬಾಂಗ್ಲಾದೇಶಿ ಪ್ರವಾಸಿಗರು ಸಜೀವ ದಹನವಗಿರುವ ಘಟನೆ ಶ್ರೀನಗರದ ದಾಲ್ ಸರೋವರದಲ್ಲಿ ನಡೆದಿದೆ. ಸರೋವರದ ಒಂಬತ್ತರ ಘಾಟ್ ಬಳಿ ಸುಟ್ಟುಹೋದ ಹೌಸ್ಬೋಟ್ಗಳ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದಿದ್ದು, ಮೃತ ಪ್ರವಾಸಿಗರನ್ನು ಅನಂದಯ ಕೌಶಾಲ್, ಮೊಹಮ್ಮದ್ ಮೊಯಿನುದ್ ಮತ್ತು ದಾಸ್ ಗುಪ್ತಾ ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಸಫೀನಾ ಹೌಸ್ಬೋಟ್ನಲ್ಲಿ ತಂಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮೃತರ ದೇಹಗಳನ್ನು ಡಿಎನ್ಎ ಹೊಂದಾಣಿಕೆಯ ನಂತರವೇ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರವಾಸಿಗರ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಶ್ರೀನಗರದ ದಾಲ್ ಸರೋವರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಂಕಿಯ ಘಟನೆಯಿಂದಾಗಿ ಮೂವರು ಪ್ರಾಣ ಕಳೆದುಕೊಂಡಿರುವುದಕ್ಕೆ ತೀವ್ರ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ಟ್ವೀಟ್ ಮೂಲಕ ತಮ್ಮ ಸಂತಾಪ”ವನ್ನು ಸೂಚಿಸಿದ್ದಾರೆ.
ಶ್ರೀನಗರ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪ್ರವಾಸಿ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಸ್ಥಳೀಯರ ಸಹಕಾರದ ಪ್ರಯತ್ನದಿಂದ ಎಂಟು ಜನರನ್ನು ರಕ್ಷಿಸಲಾಗಿದೆ. ಘಟನೆಯ ಕುರಿತು ತನಿಖೆ ಕೈಗೆತ್ತಿಕೊಂಡಿದ್ದು, ಆರ್ಎಂ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಆದರೆ, ಪ್ರಾಥಮಿಕ ತನಿಖೆ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅನಾಹುತ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ದುರಂತದಲ್ಲಿ ಐದು ಹೌಸ್ಬೋಟ್ಗಳು, ಸುತ್ತಮುತ್ತಲಿನ ಏಳು ವಸತಿ ಗುಡಿಸಲುಗಳು ಮತ್ತು ಅಕ್ಕಪಕ್ಕದ ಮನೆಗಳು ಸಹ ನಾಶವಾಗಿವೆ.