ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಕಲೇಶಪುರ ಸಮೀಪದ ಮೂಗಲಿ ಗ್ರಾಮದಲ್ಲಿ ಮಹಿಳೆ ಶೋಭಾ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಜುಲೈ 13ರಂದು ನಡೆದ ದಾಳಿಯ ಬಳಿಕ ಆತಂಕ ಮೂಡಿಸಿದ್ದ ಈ ಪುಂಡಾನೆಯನ್ನು ಹಿಡಿಯಲು ವ್ಯಾಪಕ ಕಾರ್ಯಾಚರಣೆ ನಡೆಸಲಾಯಿತು.
ಬೆಳಿಗ್ಗೆಯಿಂದಲೇ ಇಟಿಎಫ್ ಸಿಬ್ಬಂದಿ ಕಾಡಾನೆಯ ಚಲನವಲನ ಪತ್ತೆಗೆ ಶ್ರಮಿಸಿದರು. ಮಧ್ಯಾಹ್ನ ವೇಳೆಗೆ ಡ್ರೋನ್ ಸಹಾಯದಿಂದ ಬೇಲೂರು ತಾಲೂಕಿನ ಚಂದಾಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಗುರುತಿಸಲಾಯಿತು. ಬಳಿಕ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದಿಂದ ತರಿಸಲಾದ ಐದು ಕುಮ್ಕಿ ಆನೆಗಳ ನೆರವಿನಿಂದ ಕಾರ್ಯಾಚರಣೆ ಆರಂಭವಾಯಿತು.
ವೈದ್ಯರು ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದರೂ ಕಾಡಾನೆ ಸುಮಾರು 12 ಕಿಲೋಮೀಟರ್‌ಗಳಷ್ಟು ಕಾಫಿ ತೋಟಗಳು ಮತ್ತು ಕೃಷಿಭೂಮಿಗಳಲ್ಲಿ ಅಲೆದಾಡಿತು. ಎರಡನೇ ಬಾರಿ ಮದ್ದು ನೀಡಿದ ಬಳಿಕವೂ ನಿಲ್ಲದ ಆನೆ, ಕೊನೆಗೆ ಸಂಜೆ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದ ಕಾಫಿ ತೋಟದಲ್ಲಿ ಕುಸಿದು ಬಿತ್ತು.
ತಕ್ಷಣ ಸಾಕಾನೆಗಳ ನೆರವಿನಿಂದ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಲಾಯಿತು. ನಂತರ ರಿವರ್ಸಲ್ ಇಂಜೆಕ್ಷನ್ ನೀಡಿ ಎಚ್ಚರಗೊಳಿಸಿ, ಕುಮ್ಕಿ ಆನೆಗಳ ಸುತ್ತುವರಿದ ರಕ್ಷಣೆಯಲ್ಲಿ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಈ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಮಲೆನಾಡು ಭಾಗದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


