ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ನಲ್ಲಿ ಮೂವರು ಭಾರತೀಯರು ಕಾಣೆಯಾಗಿದ್ದಾರೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದ್ದು, ಅವರನ್ನು ತುರ್ತು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಜತಾಂತ್ರಿಕ ಕಾರ್ಯಕ್ರಮವೊಂದರಲ್ಲಿ ಇರಾನಿನ ಉಪ ವಿದೇಶಾಂಗ ಸಚಿವ ಮಜೀದ್ ರಾವಂಚಿ ಅವರೊಂದಿಗೆ ನೇರವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಕಾಣೆಯಾದ ಮೂವರು ವ್ಯಕ್ತಿಗಳನ್ನು ಹುಶನ್‌ಪ್ರೀತ್ ಸಿಂಗ್ (ಸಂಗ್ರೂರ್), ಜಸ್ಪಾಲ್ ಸಿಂಗ್ (ಎಸ್‌ಬಿಎಸ್ ನಗರ) ಮತ್ತು ಅಮೃತ್‌ಪಾಲ್ ಸಿಂಗ್ (ಹೋಶಿಯಾರ್‌ಪುರ) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮೇ 1 ರಂದು ಟೆಹ್ರಾನ್‌ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದರು.
3 ಭಾರತೀಯ ನಾಗರಿಕರ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರು ಇರಾನ್‌ಗೆ ಪ್ರಯಾಣಿಸಿದ ನಂತರ ಕಾಣೆಯಾಗಿದ್ದಾರೆ ಎಂದು ಭಾರತದ ರಾಯಭಾರ ಕಚೇರಿಗೆ ತಿಳಿಸಿದ್ದಾರೆ.
ರಾಯಭಾರ ಕಚೇರಿ, ತಾನು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಕುಟುಂಬ ಸದಸ್ಯರಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದೆ ಎಂದು ಹೇಳಿದೆ.
ಪಂಜಾಬ್‌ನಲ್ಲಿರುವ ಏಜೆಂಟ್ ಮೂವರು ಪುರುಷರಿಗೆ ದುಬೈ-ಇರಾನ್ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಅವರಿಗೆ ಇರಾನ್‌ನಲ್ಲಿ ವಾಸ್ತವ್ಯ ಕಲ್ಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಮೇ 1 ರಂದು ಇರಾನ್‌ಗೆ ಬಂದಿಳಿದ ಕೂಡಲೇ ಅವರನ್ನು ಅಪಹರಿಸಲಾಗಿದೆ.ಅಪಹರಣಕಾರರು 1 ಕೋಟಿ ರೂ. ವಿಮೋಚನೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಗಳು ತಿಳಿಸಿವೆ.
ಸಂತ್ರಸ್ತರು ಅಪಹರಣಕಾರರ ಫೋನ್‌ಗಳ ಮೂಲಕ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದರು. ಮೇ 11 ರಿಂದ, ಕುಟುಂಬಗಳು ಅವರೊಂದಿಗೆ ಸಂಪರ್ಕದಲ್ಲಿಲ್ಲ. ಈ ಪುರುಷರನ್ನು ವಿದೇಶಕ್ಕೆ ಕಳುಹಿಸಿದ್ದ ಹೋಶಿಯಾರ್‌ಪುರದ ಏಜೆಂಟ್ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ.