ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಿಯಾಬಾದ್‌ನಲ್ಲಿ ಮನಕಲುಕುವ ಘಟನೆ ಒಂದರಲ್ಲಿ ಆನ್‌ಲೈನ್ ಗೇಮ್‌ನ ಪ್ರಭಾವಕ್ಕೆ ಒಳಗಾದ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಜೀವ ಕಳೆದುಕೊಂಡಿರುವ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಹಲವು ಮಾಹಿತಿಗಳು ಹೊರಬಂದಿವೆ
ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂಬ ಮೂವರು ಮೃತ ಸಹೋದರಿಯರು ಸಾಮಾಜಿಕ ಜಾಲತಾಣಗಳಲ್ಲಿ ಕೊರಿಯನ್ ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದರೆಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅವರು ಮಾರಿಯಾ, ಅಲಿಜಾ ಮತ್ತು ಸಿಂಡಿ ಎಂಬ ಹೆಸರನ್ನು ಬಳಸಿಕೊಂಡು ಸಾಕಷ್ಟು ಫಾಲೋವರ್ಸ್ ಗಳಿಸಿದ್ದರು.
ಸುಮಾರು ಹತ್ತು ದಿನಗಳ ಹಿಂದೆ ಈ ವಿಚಾರ ತಿಳಿದ ತಂದೆ ಆ ಖಾತೆಯನ್ನು ಅಳಿಸಿ, ಮಕ್ಕಳಿಂದ ಮೊಬೈಲ್‌ಗಳನ್ನು ತೆಗೆದುಕೊಂಡಿದ್ದರೆಂದು ಹೇಳಲಾಗಿದೆ. ಇದರಿಂದ ಅವರು ಕೆ-ಡ್ರಾಮಾ ಹಾಗೂ ಸಂಬಂಧಿತ ವಿಷಯಗಳನ್ನು ನೋಡಲು ಸಾಧ್ಯವಾಗದೆ ಮನಸ್ಸಿಗೆ ನೋವುಂಟಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.
ಇದರ ಜೊತೆಗೆ ಕುಟುಂಬದ ಆರ್ಥಿಕ ಸಂಕಷ್ಟವೂ ಈ ಘಟನೆಗೆ ಹಿನ್ನೆಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಂದೆಯ ಮೇಲೆ ಹೆಚ್ಚಿನ ಸಾಲದ ಒತ್ತಡ ಇದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು ಎನ್ನಲಾಗಿದೆ.
ಸಾವಿಗೆ ಮುನ್ನ ಮೂವರು ಸಹೋದರಿಯರು ಬರೆದಿಟ್ಟ ಎಂಟು ಪುಟಗಳ ಟಿಪ್ಪಣಿಯಲ್ಲಿ ಕೊರಿಯನ್ ಸಂಸ್ಕೃತಿಯ ಮೇಲಿನ ತಮ್ಮ ಆಸಕ್ತಿಯನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ಇನ್ನಷ್ಟು ಪರಿಶೀಲಿಸುತ್ತಿದ್ದಾರೆ.



