ಛತ್ತೀಸ್‌ಗಢದ ದಂತೇವಾಡ-ಬಿಜಾಪುರ ಗಡಿಯಲ್ಲಿ ಗುಂಡಿನ ಚಕಮಕಿ: ಮೂವರು ನಕ್ಸಲರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ದಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ.

ಈ ಎನ್‌ಕೌಂಟರ್, ನಕ್ಸಲೀಯರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆಯ ಭಾಗವಾಗಿ ಸಂಭವಿಸಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.

ಈ ಪ್ರದೇಶದಲ್ಲಿ ನಕ್ಸಲರು ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ನಿಖರ ಮಾಹಿತಿ ಆಧಾರದ ಮೇಲೆ ಛತ್ತೀಸ್‌ಗಢ ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯ ಜಂಟಿ ತಂಡ ಸೋಮವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ನಡೆಸಿದರು.

ಮಂಗಳವಾರ ಅಡಗಿದ್ದ ನಕ್ಸಲರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದರು. ಈ ದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಈ ಗುಂಡಿನ ಕಾಳಗದಲ್ಲಿ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಮೂವರು ನಕ್ಸಲರ ಮೃತದೇಹ ಸಿಕ್ಕಿದೆ.

ಮೃತರ ಗುರುತು ಇನ್ನೂ ಖಚಿತವಾಗಿಲ್ಲವಾದರೂ, ಇವರು ಸ್ಥಳೀಯ ಮಾವೋವಾದಿ ಗುಂಪಿನ ಸದಸ್ಯರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಒಂದು ಎಕೆ-47 ರೈಫಲ್, ಎರಡು ಸ್ಥಳೀಯವಾಗಿ ತಯಾರಿಸಿದ ಬಂದೂಕುಗಳು, ಸ್ಫೋಟಕ ವಸ್ತುಗಳು ಮತ್ತು ಗುಂಡುಗಳನ್ನು ಒಳಗೊಂಡ ಶಸ್ತ್ರಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳಿಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ದೃಢಪಡಿಸಲಾಗಿದೆ. ಆದಾಗ್ಯೂ, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ತಪಾಸಣೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!