ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ನಡೆದಿದೆ.
ಕೊಲ್ಹಾಪುರ ನಗರದ ಹೊರವಲಯದಲ್ಲಿರುವ ಪುಯಿಖಾಡಿ ಗ್ರಾಮದ ಬಳಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಸುಮಾರು 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಗೋವಾದಿಂದ ಮುಂಬೈಗೆ ತೆರಳುತ್ತಿತ್ತು. ಈ ವೇಳೆ ಕೊಲ್ಹಾಪುರ-ರಾಧನಗರಿ ರಸ್ತೆಯ ಪುಯಿಖಾಡಿ ಬಳಿ ಬಸ್ ಚಾಲಕ ತಿರುವು ತೆಗೆದುಕೊಳ್ಳುವ ವೇಳೆ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕೊಲ್ಹಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾರ್ವಿರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.