ಹೊಸದಿಗಂತ ವರದಿ ಮಂಗಳೂರು:
ಮಂಗಳೂರು ನಗರದಾದ್ಯಂತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂರು ಮಂದಿ ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ಸಜೀವ ಗುಂಡುಗಳು, ಮಾದಕ ದ್ರವ್ಯ ಸೇರಿದಂತೆ ಒಟ್ಟು 27.69ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಪರಂಗಿಪೇಟೆಯ ಪುದು ಗ್ರಾಮದ ಮುಹಮ್ಮದ್ ನಿಯಾಝ್(28), ತಲಪಾಡಿ ಕೆ.ಸಿ.ರೋಡ್ನ ನಿಶಾದ್ (31), ಪಡೀಲ್ ಕಣ್ಣೂರಿನ ಮಹಮ್ಮದ್ ರಝೀನ್ (24) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಳ್ಳಾಲದ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ 180 ಗ್ರಾಂ ತೂಕದ 9 ಲಕ್ಷ ರೂ.ಮೌಲ್ಯದ ಎಂಡಿಎಂಎ, 2 ಮಾರುತಿ ಸ್ವಿಫ್ಟ್ ಕಾರುಗಳು, 4 ಮೊಬೈಲ್ ಫೋನ್ಗಳು 22,050 ರೂ.ನಗದು, ಪಿಸ್ತೂಲ್, ಸಜೀವ ಗುಂಡು, 2 ಡ್ರಾಗನ್ ಚೂರಿಗಳು, ಡಿಜಿಟಲ್ ತೂಕದ ಮಾಪನ ಸೇರಿದಂತೆ 27,69 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಯಶಸ್ವಿ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರ ತಂಡಕ್ಕೆ 20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಕಮಿಷನರ್ ತಿಳಿಸಿದರು.