ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದರುಶನಕ್ಕಾಗಿ ಹಾಸನ ಜಿಲ್ಲೆಯಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದಾರೆ. ಶನಿವಾರ ಸಂಜೆ ನದಿಯಲ್ಲಿ ಸ್ನಾನಕ್ಕಾಗಿ ಇಳಿದಿದ್ದ ಯುವಕರು ನದಿಯ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ನಾಪತ್ತೆಯಾದವರನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾದ ಅಜಿತ್ (19), ಸಚಿನ್ (20) ಹಾಗೂ ಪ್ರಮೋದ್ (20) ಎಂದು ಗುರುತಿಸಲಾಗಿದೆ. ಈ ಮೂವರು ತಮ್ಮ ಸ್ನೇಹಿತರೊಂದಿಗೆ ಒಟ್ಟು ಏಳು ಜನರ ತಂಡವಾಗಿ ಮಂತ್ರಾಲಯಕ್ಕೆ ಬಂದಿದ್ದು, ದರ್ಶನದ ಬಳಿಕ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಈ ದುರ್ಘಟನೆ ನಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ನದಿಯಲ್ಲಿ ಹೆಚ್ಚಾದ ನೀರಿನ ಹರಿವಿನ ಮಧ್ಯೆ ಈಜಲು ಇಳಿದಿದ್ದ ಈ ಮೂವರು ಯುವಕರು ನದಿಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಉಳಿದ ಸ್ನೇಹಿತರು ಅವರನ್ನು ಹುಡುಕಿದರೂ ವಿಫಲರಾದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರು ಹಾಗೂ ರಾಜಸ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಂತ್ರಾಲಯ ಪೊಲೀಸರು ತಕ್ಷಣವೇ ತಜ್ಞ ಈಜುಗಾರರನ್ನು ಸಹಿತ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ತುಂಗಭದ್ರಾ ಜಲಾಶಯದಿಂದ ಹರಿದುಬರುತ್ತಿರುವ ಭಾರೀ ನೀರಿನಿಂದಾಗಿ ನದಿಯ ಪ್ರವಾಹ ತೀವ್ರಗೊಂಡಿದ್ದು, ಶೋಧ ಕಾರ್ಯಗಳಿಗೆ ಭಾರೀ ಅಡ್ಡಿಯಾಗುತ್ತಿದೆ. ರಾತ್ರಿಯವರೆಗೆ ಕಾರ್ಯಚರಣೆ ಮುಂದುವರೆದರೂ ಈತನಕ ಯಾವುದೇ ಮಾಹಿತಿ ದೊರೆತಿಲ್ಲ.
ನದಿಯಲ್ಲಿ ಸ್ನಾನಕ್ಕೆ ಇಳಿಯಬಾರದು ಎಂಬ ಎಚ್ಚರಿಕೆಯನ್ನು ಸ್ಥಳೀಯ ಪೊಲೀಸರು ಹಾಗೂ ದೇವಸ್ಥಾನದ ಅಧಿಕಾರಿಗಳು ನಿರಂತರವಾಗಿ ನೀಡುತ್ತಿದ್ದರೂ, ಈ ಎಚ್ಚರಿಕೆಯನ್ನು ಉಲ್ಲಂಘಿಸಿ ಯುವಕರು ನದಿಗೆ ಇಳಿದಿರುವ ಸಾಧ್ಯತೆಯಿದೆ. ಇದರಿಂದಾಗಿ ಈ ಅನಾಹುತ ಸಂಭವಿಸಿರುವ ಸಾಧ್ಯತೆ ಇದೆ.