‘ಆಪರೇಷನ್ ಮಹಾದೇವ್’ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಹತ್ಯೆ: ಅಮಿತ್‌ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿಭಾಗಿಯಾಗಿದ್ದ ಉಗ್ರ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಗೆ ತಿಳಿಸಿದರು.

ಇಂದು ಆಪರೇಷನ್‌ ಸಿಂದೂರ ಚರ್ಚೆ ಮುಂದುವರಿಸಿದ ಅಮಿತ್‌ ಶಾ, ʻಆಪರೇಷನ್‌ ಮಹದೇವ್‌ʼ ಕಾರ್ಯಾಚರಣೆ ವೇಳೆ ಶ್ರೀನಗರದ ಡಚಿಗಮ್ ಎನ್‌ಕೌಂಟರ್‌ನಲ್ಲಿ ಉಗ್ರ ಹಾಶಿಮ್‌ ಮೂಸಾ ಮತ್ತು ಇತರ ಇಬ್ಬರು ಉಗ್ರರನ್ನ ಕೊಲ್ಲಲಾಗಿದೆ. ಉಳಿದಿಬ್ಬರು ಕಳೆದ ವರ್ಷ ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

ಸೋಮವಾರ ನಡೆದ ʻಆಪರೇಷನ್‌ ಮಹಾದೇವ್‌ʼ ಕಾರ್ಯಚರಣೆಯಲ್ಲಿ ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಸುಲೇಮಾನ್‌ ಮೂಸಾ, ಜಿಬ್ರಾನ್‌, ಹಮ್ಜಾ ಅಫ್ಘಾನಿ ಉಗ್ರರನ್ನ ಹತ್ಯೆಗೈಯಲಾಗಿದೆ. ಸುಲೇಮಾನ್ ಲಷ್ಕರ್-ಎ-ತೈಬಾ (LeT) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರನಾಗಿದ್ದ. ಅಲ್ಲದೇ ಈ ಮೂವರನ್ನೂ ʻAʼ ಗ್ರೇಡ್‌ನ ಉಗ್ರರು ಎಂದು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗಲು ನಾವು ಅವಕಾಶ ಕೊಡಲಿಲ್ಲ. ಪಾತಕಿಗಳನ್ನ ಇಲ್ಲಿಯೇ ಕೊಲ್ಲಲಾಗಿದೆ. ಅಲ್ಲದೇ ಪಹಲ್ಗಾಮ್‌ನಲ್ಲಿ ಬಳಸಿದ್ದ ರೈಫಲ್‌ಗಳು, ಹತ್ಯೆಯಾದ ಉಗ್ರನ ಬಳಿ ಸಿಕ್ಕಿದ್ದ ರೈಫಲ್‌ ಒಂದೇ ಅಂತ ಖಚಿತಪಡಿಸಿದ್ದೇವೆ. ನಿನ್ನೆಯೇ ಚಂಡೀಗಢಕ್ಕೆ ವಿಮಾನದಲ್ಲಿ ರೈಫಲ್ ಕಳಿಸಿ ದೃಢಪಡಿಸಿದ್ದೇವೆ. ಪಹಲ್ಗಾಮ್‌ ದಾಳಿಯಲ್ಲಿ ಸಿಕ್ಕಿದ ಗುಂಡು ಮತ್ತು ನಿನ್ನೆ ಚಂಡೀಗಢ ಎಫ್‌ಎಸ್‌ಎಲ್‌ನಲ್ಲಿ ರೈಫಲ್ ಬಳಸಿ ಅದರಿಂದಲೂ ಗುಂಡು ಹಾರಿಸಿ ಖಚಿತಪಡಿಸಿದ್ದೇವೆ. ಈ ಮೂರೂ ರೈಫಲ್‌ಗಳನ್ನ ಬಳಸಿಯೇ ಪಹಲ್ಗಾಮ್‌ನಲ್ಲಿ ದಾಳಿ ಮಾಡಿರೋದು ಖಚಿತವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!