ಮಧ್ಯಪ್ರದೇಶದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಮೂವರು ಮಹಿಳಾ ನಕ್ಸಲರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಬುಧವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ.

ಛತ್ತೀಸ್‌ಗಢ ಗಡಿ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಜ್ಯ ಪೊಲೀಸರ ನಕ್ಸಲ್ ವಿರೋಧಿ ಪಡೆ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಭಾಗವಹಿಸಿದ್ದವು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಬಾರ್ ಅವರು ಹೇಳಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ದಬಾರ್ ಅವರು ತಿಳಿಸಿದ್ದಾರೆ.

ಗಾರ್ಹಿ ಪೊಲೀಸ್ ಠಾಣೆ ಪ್ರದೇಶದ ಸುಪ್ಖರ್ ಅರಣ್ಯ ಶ್ರೇಣಿಯ ರೊಂಡಾ ಅರಣ್ಯ ಶಿಬಿರದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಾಕ್ ಪಡೆ ಮತ್ತು ಪೊಲೀಸರು ಮೂವರು ಹಾರ್ಡ್‌ಕೋರ್ ನಕ್ಸಲರನ್ನು ಹೊಡೆದುರುಳಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನಕ್ಸಲರಿಂದ ಒಂದು ಐಎನ್‌ಎಸ್‌ಎಎಸ್ ರೈಫಲ್, ಒಂದು ಸೆಲ್ಫ್-ಲೋಡಿಂಗ್ ರೈಫಲ್(ಎಸ್‌ಎಲ್‌ಆರ್) ಮತ್ತು .303 ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಅಗತ್ಯ ದೈನಂದಿನ ಬಳಕೆಯ ವಸ್ತುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಕೆಲವು ನಕ್ಸಲರು ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ. ಆದರೆ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಪ್ಪಿಸಿಕೊಂಡ ನಕ್ಸಲರನ್ನು ಪತ್ತೆಹಚ್ಚಲು ಹನ್ನೆರಡು ಪೊಲೀಸ್ ತಂಡಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here