ಹೊಸದಿಗಂತ ವರದಿ, ಮಡಿಕೇರಿ:
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೆಮ್ಮನೆ ಗ್ರಾಮದ ನಿವಾಸಿ ಆದರ್ಶ ಶಿಕ್ಷೆಗೆ ಗುರಿಯಾದವನು.
ಘಟನೆಯ ಹಿನ್ನೆಲೆ: ಅಪ್ರಾಪ್ತ ಬಾಲಕಿಯು 2021ರ ಡಿ.12ರಂದು ಕಾಲೇಜು ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೊರಗಲ್ಲು ಗ್ರಾಮದ ಕೆರೆಯ ಬಳಿ ಆರೋಪಿಯು ಬೈಕ್’ನಲ್ಲಿ ಎದುರುಗಡೆ ಬಂದು ನೊಂದ ಬಾಲಕಿಗೆ ಬೈಕ್ ಹತ್ತು ಮನೆಗೆ ಬಿಡುತ್ತೇನೆ ಎಂದು ಹೇಳಿದನೆನ್ನಲಾಗಿದೆ.
ನೊಂದ ಬಾಲಕಿಯು ಬೈಕ್ ಹತ್ತದೆ ಮುಂದೆ ಹೋದಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯನ್ನು ಅತ್ಯಾಚಾರ ಮಾಡುವ ಉದ್ದೇಶದಿಂದ ಪಕ್ಕದ ಕಾಡಿಗೆ ಎಳೆದುಕೊಂಡು ಹೋಗಿ ಆಕೆಯ ಮೂಗಿನ ಭಾಗಕ್ಕೆ ಕಚ್ಚಿ ಗಾಯಪಡಿಸಿದ್ದಾಗಿ ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್. ಪರಶಿವಮೂರ್ತಿ ಅವರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅಡಿಯ ಅಪರಾಧಕ್ಕಾಗಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಕೆ. ಬಸವರಾಜ್ ಅವರು ವಿಚಾರಣೆ ಕೈಗೊಂಡು ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಲೈಂಗಿಕ ಕಿರುಕುಳ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಒಂದು ವರ್ಷ ಸಜೆ ಮತ್ತು ರೂ. 1000/- ದಂಡ, ಪೋಕ್ಸೋ ಕಾಯ್ದೆ ಅಡಿಯಲ್ಲಿ 3 ವರ್ಷ ಸಜೆ ಮತ್ತು ರೂ.9000/- ದಂಡದ ಜೊತೆಗೆ ನೊಂದ ಬಾಲಕಿಗೆ ಒಂದು ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ್ದಾರೆ.
ಸರಕಾರದ ಪರ ವಿಶೇಷ ಅಭಿಯೋಜಕ ಬಿ. ಎಸ್.ರುದ್ರಪ್ರಸನ್ನ ವಾದ ಮಂಡಿಸಿದರು.