ಹೊಸದಿಗಂತ ವರದಿ,ಮಡಿಕೇರಿ:
ನದಿಯಲ್ಲಿ ಈಜಲು ತೆರಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದ್ದು, ಈ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ.
ಕುಶಾಲನಗರ ಸಮೀಪದ ಕೂಡಿಗೆ ಬಳಿ ಈ ದುರ್ಘಟನೆ ನಡೆದಿದ್ದು, ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25) ಮುಳ್ಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಮೃತಪಟ್ಟ ದುರ್ದೈವಿಗಳೆನ್ನಲಾಗಿದೆ. ಈ ಪೈಕಿ ಶ್ರೀನಿವಾಸ್’ನ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಗುರುವಾರ ಸಂಜೆ 5ಗಂಟೆ ಸುಮಾರಿಗೆ ಐದು ಜನ ಸ್ನೇಹಿತರು ಕಾರು ನಿಲ್ಲಿಸಿ, ನದಿಯಲ್ಲಿ ಸ್ಥಾನಕ್ಕೆಂದು ಇಳಿದ ಸಂದರ್ಭ ಆಳವಾದ ಜಾಗದಲ್ಲಿ ಮುಳುಗಿದ ಒಬ್ಬನನ್ನು ರಕ್ಷಿಸಲು ಹೋದಾಗ ಮತ್ತಿಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ನಿರಂತರ ಶೋಧದ ಬಳಿಕ ಶ್ರೀನಿವಾಸ್ ಎಂಬವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಸೋಮವಾರಪೇಟೆ ಉಪ ವಿಭಾಗದ ಡಿ ವೈ ಎಸ್ ಪಿ ಗಂಗಾಧರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.