ಮಹಿಳಾ ಅರಣ್ಯಾಧಿಕಾರಿಗೆ ಬೆದರಿಕೆ: ಬಂಗಾಳ ಸಚಿವ ರಾಜೀನಾಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್;
 
ಪಶ್ಚಿಮ ಬಂಗಾಳ ದೀದಿ ಸರಕಾರದ ಸಚಿವ ಅಖಿಲ್‌ ಗಿರಿ ಅವರು ಮಹಿಳಾ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ ವಿಡಿಯೋ ಭಾರಿ ವೈರಲ್‌ ಆಗಿದೆ. ಅಖಿಲ್‌ ಗಿರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ .

ಇದರ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ಭಾನುವಾರ (ಆಗಸ್ಟ್‌ 4) ಅಖಿಲ್‌ ಗಿರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ಅಧಿಕಾರಿಯ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಬರುವುದಿಲ್ಲ. ನನ್ನ ಪಕ್ಷವು ನನಗೆ ರಾಜೀನಾಮೆ ನೀಡು ಎಂದು ಸೂಚಿಸಿದೆಯೇ ಹೊರತು, ಕ್ಷಮೆ ಕೇಳು ಎಂದು ಸೂಚನೆ ನೀಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಸೂಚಿಸಿದ್ದಾರೆ, ಅದರಂತೆ ರಾಜೀನಾಮೆ ನೀಡಿದ್ದೇನೆ. ನಾನು ಮಹಿಳಾ ಅಧಿಕಾರಿ ಜತೆ ತೋರಿದ ವರ್ತನೆಯು ದುರದೃಷ್ಟಕರವಾಗಿದೆ. ನನ್ನ ಬಾಯಿಯಿಂದ ಅಂತಹ ಮಾತುಗಳು ಬರಬಾರದಿತ್ತು. ಅದರ ಬಗ್ಗೆ ನನಗೆ ಬೇಸರವಿದೆಎಂದಷ್ಟೇ ಹೇಳಿದ್ದಾರೆ.

ಏನಿದು ಪ್ರಕರಣ?
ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ತಡೆಯಲು ಜಿಲ್ಲಾ ಅರಣ್ಯಾಧಿಕಾರಿ ಮನಿಶಾ ಶೌ ಅವರು ತೆರಳಿದ್ದರು. ಇದೇ ವೇಳೆ ಅಧಿಕಾರಿಯ ಕೆಲಸಕ್ಕೆ ಅಖಿಲ್‌ ಗಿರಿ ಅಡ್ಡಿಪಡಿಸಿದ್ದಲ್ಲದೆ, ಬೆದರಿಕೆ ಹಾಕಿದ್ದರು. ನೀನು ಇಂತಹ ಅತಿಕ್ರಮಣ ವಿಚಾರಗಳಲ್ಲಿ ಮೂಗು ತೂರಿಸಿದರೆ, ನೀನು ವಾಪಸ್‌ ಬರದಂತೆಯೇ ಮಾಡಿಬಿಡುತ್ತೇನೆ ಎಂದು ಅಖಿಲ್‌ ಗಿರಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು.

‘ನನ್ನ ಜತೆ ಮಾತನಾಡುವಾಗ, ನೀನು ತಲೆ ತಗ್ಗಿಸಿ ಮಾತನಾಡಬೇಕು. ಇಲ್ಲದಿದ್ದರೆ ದೊಣ್ಣೆಗಳಿಂದ ನಿನ್ನನ್ನು ಬಡಿದುಬಿಡುತ್ತೇನೆ. ಇವರೆಲ್ಲರೂ ನೀನು ರಾತ್ರಿ ಮನೆಗೆ ಹೋಗದಂತೆ ಮಾಡುತ್ತಾರೆ ಎಂದು ಹೇಳಿದ್ದರು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆಎಂಬುದಾಗಿ ಮಹಿಳಾ ಅಧಿಕಾರಿ ಹೇಳಿದಾಗ, ಮತ್ತಷ್ಟು ಕುಪಿತಗೊಂಡ ಅಖಿಲ್‌ ಗಿರಿ, ‘ಒಂದು ವಾರದಲ್ಲಿ ಏನಾಗುತ್ತದೆ ಎಂಬುದನ್ನು ನೋಡುತ್ತಿರು’ ಎಂದು ಗದರಿದ್ದರು.

ಅಖಿಲ್‌ ಗಿರಿ ಬೆದರಿಕೆ ಹಾಕಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಬಿಜೆಪಿ, ಆಕ್ರೋಶ ವ್ಯಕ್ತಪಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!