ಹೊಸ ದಿಗಂತ ವರದಿ, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಗೌಡಿಹಳ್ಳಿ ಶಾಲೆಯ ವಿದ್ಯಾರ್ಥಿನಿಯರು ಥ್ರೋ ಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯಿಂದ ಸಂಘಟಿಸಿದ ರಾಜ್ಯಮಟ್ಟದ 17 ವರ್ಷ ವಯೋಮಿತಿ ಒಳಗಿನ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.
ಉತ್ತಮ ಸಾಧನೆ ಮಾಡಿರುವ ಕ್ರೀಡಾ ಪ್ರತಿಭೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಹಾಗೂ ಮೈಸೂರು ವಿಭಾಗೀಯ (ದೈಹಿಕ ಶಿಕ್ಷಣ) ಉಪ ನಿರ್ದೇಶಕರಾದ ಎ.ಪರಶುರಾಮಪ್ಪ, ಚಿತ್ರದುರ್ಗ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದಸ್ವಾಮಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ದೈಹಿಕ ಶಿಕ್ಷಣ ಅಧಿಕಾರಿ ಎಂ.ಹೆಚ್.ಜಯಣ್ಣ, ಚಳ್ಳಕೆರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುನಿಲ್ ನಾಯ್ಕ, ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರಪ್ಪ, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಕುಮಾರ್, ಕ್ರೀಡಾಪಟುಗಳಾದ ಸ್ವಪ್ನ, ಸಾರಿಕಾ, ಮಾನ್ವಿ, ಮಾನ್ಯ, ಐಶ್ವರ್ಯ, ಸಾಕ್ಷಿ, ರಮ್ಯಾ ಉಪಸ್ಥಿತರಿದ್ದರು.