ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 26 ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕಿಂತ ಗಾಳಿಯ ಅಬ್ಬರವೇ ಹೆಚ್ಚಾಗಿದ್ದು, ಹಲವೆಡೆ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ನಾಪೋಕ್ಲು ಹೋಬಳಿಯ ಎಮ್ಮೆಮಾಡು ಗ್ರಾಮದ ಅಬ್ದುಲ್ ಅಫೀಲ್ ಅವರ ವಾಸದ ಮನೆಯ ಪಕ್ಕದಲ್ಲಿ ಬರೆ ಜರಿದಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ.ಆದರೆ ಸಂಪಾಜೆ ಹೋಬಳಿಯ ಚೆoಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಡಬ್ಬಡ್ಕ ಗ್ರಾಮದ ಮುಕ್ಕಾಟಿ ತಮ್ಮಯ್ಯ ಎಂಬವರ ಕೊಟ್ಟಿಗೆ ಮೇಲೆ ಗಾಳಿಯಿಂದ ಮರ ಬಿದ್ದು ಹಾನಿಯಾಗಿರುವುದಾಗಿ ವರದಿಯಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 55.88 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 57, ನಾಪೋಕ್ಲು 68.60, ಸಂಪಾಜೆ 96, ಭಾಗಮಂಡಲ 131.40, ವೀರಾಜಪೇಟೆ 45.40, ಅಮ್ಮತ್ತಿ 35.50, ಹುದಿಕೇರಿ 34.30, ಶ್ರೀಮಂಗಲ 66, ಪೊನ್ನಂಪೇಟೆ 35, ಬಾಳೆಲೆ 21, ಸೋಮವಾರಪೇಟೆ 74.20, ಶನಿವಾರಸಂತೆ 68, ಶಾಂತಳ್ಳಿ 156, ಕೊಡ್ಲಿಪೇಟೆ 43, ಕುಶಾಲನಗರ 12.60, ಸುಂಟಿಕೊಪ್ಪ 40 ಮಿ.ಮೀ.ಮಳೆಯಾಗಿದೆ.