ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿ ಬೇಟೆ ಆಡಿದವರನ್ನು ತೀವ್ರವಾಗಿ ಹುಡುಕಲಾಗುತ್ತಿದೆ.
ಕಾಡು ಹಂದಿ ಸೆರೆಗೆ ಹಾಕಲಾಗಿದ್ದ ಉರುಳು ರಾಷ್ಟ್ರ ಮೃಗದ ಪ್ರಾಣಕ್ಕೆ ಉರುಳಾಗಿದೆ. ರಾಷ್ಟ್ರ ಮೃಗ ದಾರುಣವಾಗಿ ಸಾವನ್ನಪ್ಪಿದೆ. ಕಾಡಲ್ಲಿ ಜಿಂಕೆ ಬೇಟೆ ಮಾಡಿ ಹೊಟ್ಟೆ ತುಂಬಾ ತಿಂದು ಮತ್ತೊಂದು ಕಾಡಿನತ್ತ ಹುಲಿ ಹೊರಟಿತ್ತು. ಆದರೆ ದುಷ್ಕರ್ಮಿಗಳು ಹಾಕಿದ ಉರುಳಿಗೆ ಹುಲಿ ಅನ್ಯಾಯವಾಗಿ ಪ್ರಾಣ ಬಿಟ್ಟಿದೆ. ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದಲ್ಲಿ ಮಂಗಳವಾರ ಎಸ್ಟೇಟ್ ರಸ್ತೆ ಬದಿಯಲ್ಲಿ ಹುಲಿ ಹೆಣವಾಗಿ ಪತ್ತೆಯಾಗಿದೆ.
ಎಲ್ಲೋ ಉರುಳಿಗೆ ಸಿಲುಕಿದ್ದ ಹುಲಿ ನರಳುತ್ತಾ ಇಲ್ಲಿಗೆ ಬಂದು ಪ್ರಾಣ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ನಾಗರಹೊಳೆಯಿಂದ ಸ್ಟೆಲ್ಲಾ ಹೆಸರಿನ ಸ್ನಿಪ್ಪರ್ ನಾಯಿಯನ್ನ ಕರೆತಂದು ಉರುಳು ಹಾಕಿದ ಸ್ಥಳ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ. ಎಸಿಎಫ್ ಗೋಪಾಲ್ ಸ್ಥಳದಲ್ಲೇ ಬೀಡು ಬಿಟ್ಟು ಹುಲಿ ಉರುಳಿಗೆ ಬಿದ್ಧ ಸ್ಥಳವನ್ನ ಜಾಲಾಡಿದ್ದು, ಸಂಜೆಯಾದರೂ ಸ್ಥಳ ಪತ್ತೆಯಾಗದೆ ಕಾರ್ಯಚರಣೆಗೆ ಹಿನ್ನಡೆ ಉಂಟಾಗಿದೆ. ಉರುಳು ಹಾಕಿದ ಸ್ಥಳ ಪತ್ತೆಯಾದರೆ ಮಾತ್ರ ಉರುಳು ಹಾಕಿದ ದುಷ್ಕರ್ಮಿಗಳು ಪತ್ತೆಯಾಗುತ್ತಾರೆ.
ಇನ್ನು ಈ ಹುಲಿ ಇಲ್ಲಿಂದ ಆರು ಕಿಮಿ ದೂರವಿರುವ ಮೀನುಕೊಲ್ಲಿ ಅರಣ್ಯದಿಂದ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಏಳರಿಂದ ಎಂಟು ವಯಸ್ಸಿನ ಗಂಡು ಹುಲಿಗೆ ಇನ್ನೂ ಐಡಿ ಆಗಿರಲಿಲ್ಲ. ಹಾಗಾಗಿ ಇದು ಯಾವ ಅರಣ್ಯದ ಹುಲಿ ಎಂಬುದು ಖಚಿತವಾಗಿಲ್ಲ. ಬಹುಶಃ ಮೀನುಕೊಲ್ಲಿ ಅರಣ್ಯದಿಂದ ದುಬಾರೆ ಅರಣ್ಯಕ್ಕೆ ತೆರಳುತ್ತಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದೆ.

