ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಪಿಲಿಕುಳದ ಜೈವಿಕ ಉದ್ಯಾನವನದ ಹುಲಿ ‘ನೇತ್ರಾವತಿ’ ಬುಧವಾರ ಬೆಳಗ್ಗೆ 9.45ರ ಹೊತ್ತಿಗೆ ಅಸುನೀಗಿದೆ. ಅದಕ್ಕೆ 15 ವರ್ಷ ವಯಸ್ಸಾಗಿತ್ತು.
ಆರು ವರ್ಷ ಪ್ರಾಯದ ಗಂಡು ಹುಲಿ ‘ರೇವಾ’ ಮತ್ತು ನೇತ್ರಾವತಿ ನಡುವೆ ಜು.4ರಂದು ಕಚ್ಚಾಟ ನಡೆದು ಗಾಯಗೊಂಡಿತ್ತು. ನೇತ್ರಾವತಿಗೆ ಚಿಕಿತ್ಸೆ ನೀಡಲಾಗುತಿತ್ತು.
ರೇವಾ ಬೆದೆಗೆ ಬಂದುದರಿಂದ ನೇತ್ರಾವತಿಯ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಹೆಣ್ಣು ಹುಲಿ ಗಂಡು ಹುಲಿಯ ಮೇಲೆ ಎರಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಹುಲಿಗಳ ಕಚ್ಚಾಟವನ್ನು ಹತೋಟಿಗೆ ತಂದು ಗೂಡಿನ ಒಳಗೆ ಸೇರಿಸಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ನೇತ್ರಾವತಿ ಸಹಜ ಸ್ಥಿತಿಗೆ ಮರಳುತಿತ್ತು.
ನೀರು ಮತ್ತು ಆಹಾರ ಸೇವಿಸಲು ಆರಂಭಿಸಿತ್ತು. ಆದರೆ ಬುಧವಾರ ಬೆಳಗ್ಗೆ ವೈದ್ಯಾಧಿಕಾರಿ ಚಿಕಿತ್ಸೆ ನೀಡುತ್ತಿರುವಾಗಲೇ ಕುಸಿದು ಬಿದ್ದ ನೇತ್ರಾವತಿ ಪ್ರಾಣ ಕಳೆದು ಕೊಂಡಿತು. ಹೃದಯಾಘಾತದಿಂದ ಹುಲಿ ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಿಂದ ಸಾವಿನ ನಿಖರ ಕಾರಣ ತಿಳಿಯಲಿದೆ. ರೇವಾ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದೆ. ಪಿಲಿಕುಳದಲ್ಲಿ ಪ್ರಸ್ತುತ 8 ಹುಲಿಗಳಿವೆ.