ಹೊಸದಿಗಂತ ವರದಿ ಮಡಿಕೇರಿ:
ನಗರದ ಹೊರವಲಯದ ಇಬ್ನಿವಳವಾಡಿ ಗ್ರಾಮದಲ್ಲಿ ಹುಲಿಯ ಚಲನವಲನ ಕಂಡು ಬಂದಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮಡಿಕೇರಿ ನಗರದಿಂದ ಕೇವಲ ಎರಡು ಕೀ.ಮೀ.ದೂರದಲ್ಲಿರುವ ಇಬ್ನಿವಳವಾಡಿ ಗ್ರಾಮದ ಪೊನ್ನಚೆಟ್ಟಿರ ಸಂದೀಪ್ ಎಂಬವರ ತೋಟದಲ್ಲಿ ಹುಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆ ಭಾಗದ ಏಳೆಂಟು ಕಿ.ಮೀ ವ್ಯಾಪ್ತಿಯಲ್ಲಿ ಹುಲಿಯನ್ನು ಹೋಲುವ ಪ್ರಾಣಿಯ ಓಡಾಟದ ಬಗ್ಗೆ ಮಾಹಿತಿ ಇತ್ತು. ಅದು ಹುಲಿಯೋ, ಪೆರ್ಪಣವೋ ಎಂಬ ಗೊಂದಲವೂ ಇತ್ತು.ಇದೀಗ ಅದು ಹುಲಿ ಎಂಬುದು ಖಚಿತವಾಗಿದ್ದು, ಅದನ್ನು ಸೆರೆಹಿಡಿಯಲು ಸರಕಾರದ ಅನುಮತಿ ಕೋರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದ ಸನಿಹದಲ್ಲೇ ಹುಲಿಯ ಓಡಾಟ ಕಂಡು ಬಂದಿರುವುದರಿಂದ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಪ್ರಸಕ್ತ ಇಬ್ನಿವಳವಾಡಿ ಗ್ರಾಮದ ಭದ್ರಕಾಳಿ ದೇವರ ಊರ ಹಬ್ಬ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಗ್ರಾಮದಲ್ಲಿ ಹುಲಿಯ ಓಡಾಟ ಕಂಡು ಬಂದಿರುವುದು ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ.



